ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಈಗಾಗಲೇ 4ನೇ ಸ್ಥಾನಕ್ಕೇರಿರುವ ಭಾರತ ಇದೀಗ ಅತೀ ಹೆಚ್ಚು ಸಾವು ಕಂಡ ದೇಶಗಳ ಪಟ್ಟಿಯಲ್ಲೂ 9ನೇ ಸ್ಥಾನಕ್ಕೇರಿದೆ.
ಶನಿವಾರ 311 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 9,195ಕ್ಕೆ ಏರಿಕೆಯಾಗಿದೆ. ಆ ಮೂಲಕ ವಿಶ್ವದಲ್ಲಿ ಕೊರೋನಾ ವೈರಸ್ ಗೆ ಅತೀ ಹೆಚ್ಚು ಸಾವು ಕಂಡ ದೇಶಗಳ ಪಟ್ಟಿಯಲ್ಲಿ ಭಾರತ ಇದೀಗ ಟಾಪ್ 10 ಪಟ್ಟಿ ಸೇರಿದೆ. ಪ್ರಸ್ತುತ ಭಾರತ 9ನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಕೊರೋನಾ ಸಾವು ಕಂಡ ದೇಶಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಬ್ರಿಟನ್ ಮೂರನೇ ಸ್ಥಾನದಲ್ಲಿದ್ದು, ಇಟಲಿ, ಫ್ರಾನ್ಸ್, ಸ್ಪೇನ್, ಮೆಕ್ಸಿಕೊ ಮತ್ತು ಬೆಲ್ಜಿಯಂ ನಂತರದ ಸ್ಥಾನಗಳಲ್ಲಿವೆ.
ಅಮೆರಿಕದಲ್ಲಿ ಕೊರೋನಾ ವೈರಸ್ ಗೆ 1.14 ಲಕ್ಷ ಮಂದಿ ಬಲಿಯಾಗಿದ್ದು, ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಬೆಲ್ಜಿಯಂ ನಲ್ಲಿ 9,650 ಸಾವು ಸಂಭವಿಸಿದೆ.
ಇನ್ನು ಸೋಂಕಿತ ಪಟ್ಟಿಯಲ್ಲಿ 20ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ಅಮೆರಿಕ ಅಗ್ರ ಸ್ಥಾನದಲ್ಲಿದ್ದು, 8.3 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. 5.2 ಲಕ್ಷ ಸೋಂಕಿತರನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 11,929 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ದೇಶದಲ್ಲಿ ಒಟ್ಟಾರೆ 3,20,922 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಈ ನಡುವೆ 3,20,922 ಮಂದಿ ಸೋಂಕಿತರ ಪೈಕಿ 1,62,379 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ದೇಶದಲ್ಲಿ 1,49,348 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
Follow us on Social media