ಕೊಡಗು/ಮಂಡ್ಯ/ಕಾರವಾರ/ಗದಗ: ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅನುತ್ತೀರ್ಣಗೊಂಡಿದ್ದಕ್ಕೆ ಮತ್ತು ಕಡಿಮೆ ಅಂಕ ಬಂದ ಕಾರಣಕ್ಕಾಗಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದಲ್ಲಿ ನಡೆದಿದೆ.
ಕುಶಾಲನಗರ ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ, ಕೊಡಗಿನ ಬಸವನಹಳ್ಳಿ ನಿವಾಸಿ ಸಂಧ್ಯಾ (18) ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದೆಂಬ ಆತಂಕದಿಂದ ಫಲಿತಾಂಶ ಪ್ರಕಟಗೊಳ್ಳುವುದಕ್ಕೆ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಸಂಧ್ಯಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫಲಿತಾಂಶ ನೋಡಿದಾಗ ಅವರಿಗೆ ಶೇ. 67 ಅಂಕ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಹೆರೂರು ನಿವಾಸಿ ನಿವೃತ ಯೋಧ ಸುಭಾಷ್-ಸೌಮ್ಯಾ ಅವರ ಪುತ್ರಿ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಮಹದೇವಪುರದಲ್ಲಿ ಸಾಂತೋಂ ಕಾಲೇಜಿನ ಪಿಸಿಎಂಬಿ ವಿದ್ಯಾರ್ಥಿನಿ ಸ್ಪಂದನಾ ನೇಣಿಗೆ ಶರಣಾಗಿದ್ದಾರೆ. ಇವರು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಅನುತ್ತೀರ್ಣರಾಗಿದ್ದರು.
ಎ.ವಿ ಬಾಳಿಗ ಕಾಲೇಜಿನ ವಿದ್ಯಾರ್ಥಿ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಪ್ರಣಮ್ ಈಶ್ವರ್ ನಾಯ್ಕ (18) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜ್ಞಾನದಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕಾಗಿ ಬಾಲಕ ಈನಿರ್ಧಾರ ತೆಗೆದುಕೊಂಡಿದ್ದಾನೆ. ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರಾ ಲಿಂಗದಾಳ (18) ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತತ್‌ಕ್ಷಣ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media