ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಸಾಫ್ಟ್ ವೇರ್ ಎಂಜಿನಿಯರ್ ವೀಣಾ ಥಯಿಕ್ಕಂಡಿಯಿಲ್ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಇಂದು ಮದುವೆಯಾಗಿದ್ದಾರೆ.
ವಿಶೇಷ ವಿವಾಹ ಕಾಯ್ಡೆಯಡಿ ಸಿಎಂ ಮಗಳು ವೀಣಾ ಅವರ ಮದುವೆಯನ್ನು ರಿಜಿಸ್ಟರ್ ಮಾಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಇವರಿಬ್ಬರು ರಿಜಿಸ್ಟರ್ ಮದುವೆಯಾಗಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಈ ವಿವಾಹದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಿಎಂ ಸರ್ಕಾರಿ ನಿವಾಸದಲ್ಲಿ ನಡೆದ ಮೊದಲ ಮದುವೆ ಇದಾಗಿದೆ.
ವೀಣಾ ಬೆಂಗಳೂರಿನಲ್ಲಿ ಐಟಿ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವೀಣಾ ಅವರು ಒರಾಕಲ್ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಎಂಟು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ದಾರೆ. ನಂತರ ಗಲ್ಫ್ ಮೂಲದ ಎನ್‍ಆರ್‍ಐ ರವಿ ಪಿಳ್ಳೈ ಒಡೆತನದ ತಿರುವನಂತಪುರಂನಲ್ಲಿ ಆರ್‌ಪಿ ಟೆಕ್ಸಾಫ್ಟ್ ನಲ್ಲಿ ಸಿಇಒ ಆಗಿದ್ದರು. ಪ್ರಸ್ತುತ ಅವರು ಬೆಂಗಳೂರಿನಲ್ಲಿ 2015 ರಲ್ಲಿ ಪ್ರಾರಂಭಿಸಿದ Exalogic Solutions Private Limitedನ ಮುಖ್ಯಸ್ಥರಾಗಿದ್ದಾರೆ.
ರಿಯಾಸ್ ನಿವೃತ್ತ ಐಪಿಎಸ್ ಅಧಿಕಾರಿ ಪಿಎಂ ಅಬ್ದುಲ್ ಖಾದರ್ ಅವರ ಪುತ್ರರಾಗಿದ್ದು, ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಈ ಹಿಂದೆ ಡಿವೈಎಫ್‍ಐನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದ ಅವರು 2017ರ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. 2009ರ ಲೋಕಸಭಾ ಚುನಾವಣೆಯಲ್ಲಿ ರಿಯಾಸ್ ಸಿಪಿಎಂ ಅಭ್ಯರ್ಥಿಯಾಗಿ ಕೊಜ್ಹಿಕೊಡೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಎಂ.ಕೆ.ರಾಘವನ್ ವಿರುದ್ಧ 838 ಮತಗಳ ಅಂತರದಿಂದ ಸೋತಿದ್ದರು. 2017ರ ಕೇರಳದ ಗೋಮಾಂಸ ನಿಷೇಧ ಪ್ರತಿಭಟನೆ ರಾಷ್ಟ್ರದಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಪ್ರತಿಭಟನೆಯ ಸಂದರ್ಭದಲ್ಲಿ ರಿಯಾಸ್ ಮುಖ್ಯ ಪಾತ್ರ ವಹಿಸಿದ್ದರು. ವಾಹಿನಿಗಳಲ್ಲಿ ಇವರು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುತ್ತಾರೆ.
43 ವರ್ಷದ ರಿಯಾಸ್ ಮತ್ತು ವೀಣಾ ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ. ರಿಯಾಸ್ 2002ರಲ್ಲಿ ಮದುವೆಯಾಗಿದ್ದು, 2015ರಲ್ಲಿ ವಿಚ್ಛೇದನ ಪಡೆದಿದ್ದರು. ಅಲ್ಲದೇ ರಿಯಾಸ್ ಇಬ್ಬರು ಮಕ್ಕಳ ತಂದೆಯಾಗಿದ್ದರೆ. ಇನ್ನೂ ವೀಣಾ ಕೂಡ ಈ ಹಿಂದೆ ಮದುವೆಯಾಗಿದ್ದು, ವೀಣಾ 2015ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಒಂದು ಮಗು ಕೂಡ ಇದೆ.
Follow us on Social media