ಬೆಂಗಳೂರು: ಕೋವಿಡ್ನಂಥ ಸಂಕಷ್ಟ ಪರಿಸ್ಥಿತಿಯೂ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಬಲ್ಲ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಘಟಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಲೋಕಾರ್ಪಣೆ ಮಾಡಿದರು.
ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೇವಲ ಮೂರು ತಿಂಗಳ ಕಾಲದಲ್ಲಿ ಸ್ಥಾಪಿಸಲಾಗಿರುವ 100 ಹಾಸಿಗೆಗಳ ಈ ಐಸಿಯು, ಈ ಮೂಲಕ ಇಂದಿನಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದು, ದಾನಿಗಳ ನೆರವಿನಿಂದ ಈ ಘಟಕವನ್ನು ಸ್ಥಾಪನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡ್ಯೂಲರ್ ಐಸಿಯು ಸ್ಥಾಪಿಸಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆ ವತಿಯಿಂದ 50 ಹಾಸಿಗೆಯ ಕ್ಯಾಥ್ ಲ್ಯಾಬ್ ಸ್ಥಾಪನೆ ಹಾಗೂ 50 ಹಾಸಿಗೆಯ ಟ್ರಾಮಾ ಕೇರ್ ಸೆಂಟರ್ ಹಾಗೂ 150 ಹಾಸಿಗೆಯ ತಾಯಿ- ಮಗು ಚಿಕಿತ್ಸಾ ಕೇಂದ್ರವನ್ನು ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಎಲ್ಲ ಸೌಲಭ್ಯಗಳನ್ನು ಒದಗಿಸುವ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಮುಖ್ಯಮಂತ್ರಿ ಒಪ್ಪಿದರು.
2,100ಕ್ಕೂ ಅಧಿಕ ಕೋವಿಡ್ ರೋಗಿಗಳಿಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದ ಸಿಎಂ ಅವರು, ಕೋವಿಡ್ ಲಸಿಕೆ ಅಭಿಯಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈಚೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿಗಳು ಕೂಡ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದರು. ಈ ನಿಟ್ಟಿನಲ್ಲಿ ಇಲಾಖೆಗೆ ಹೆಚ್ಚೆಚ್ಚು ಅನುದಾನ ಬಿಡುಗಡೆ ಮಾಡಲು ಸರಕಾರ ಬದ್ಧವಿದೆ ಎಂದರು ಸಿಎಂ.
ದಾನಿಗಳ ನೆರವು: ಪ್ರಾಸ್ತಾವಿಕ ಭಾಷಣ ಮಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾಡ್ಯೂಲರ್ ಐಸಿಯುಗಳ ಅತ್ಯಂತ ಸಹಕಾರಿ. 100 ಹಾಸಿಗೆಗಳು ಇಲ್ಲಿ ಲಭ್ಯವಿದ್ದು, ದಾನಿಗಳ ನೆರವಿನಿಂದ ನಿರ್ಮಾಣ ಮಾಡಲಾಗಿದೆ. ಎಂಥಹುದೇ ಪರಿಸ್ಥಿತಿಯಲ್ಲೂ ಇವುಗಳನ್ನು ಬಳಸಬಹುದಾಗಿದ್ದು, ರಾಜ್ಯದ ಆವಿಷ್ಕಾರ ಕುಶಲತೆಗೆ ಕನ್ನಡಿಯಾಗಿದೆ ಎಂದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿನ ಟ್ರಾಮಾ ಕೇರ್ ಸೆಂಟರನ್ನೇ ಅಕಾಡೆಮಿಕ್ ಕ್ರಿಟಿಕಲ್ ಕೇರ್ ಸೆಂಟರ್ ಆಗಿ ಮಾಡುವುದರಿಂದ ತಜ್ಞ ಸಿಬ್ಬಂದಿಯ ಕೊರತೆ ನೀಗಿಸಬಹುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ದಿನೇಶ್ ಗುಂಡೂರಾವ್ ಮೆಚ್ಚುಗೆ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ ಇಂಥಹ ಸುಸಜ್ಜಿತ ಹಾಗೂ ಅತ್ಯಾಧುನಿಕ ಮಾಡ್ಯೂಲರ್ ಐಸಿಯು ಸ್ಥಾಪನೆಯಾಗಿದೆ ಎಂದರೆ ಅಚ್ಚರಿಯ ಸಂಗತಿಯೇ ಸರಿ ಎಂದು ಶ್ಲಾಘಿಸಿದರು. ಇದೇ ವೇಳೆ ಎಲ್ಲ ದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಜರಿದ್ದರು.
ಮಾಡ್ಯೂಲರ್ ಐಸಿಯು ಎಂದರೇನು: ಸರಕು ಸಾಗಣೆ ಮಾಡುವ ಕಂಟೇನರ್ʼಗಳ ಮಾದರಿ ಇಟ್ಟುಕೊಂಡು ಈ ಐಸಿಯುಗಳನ್ನು ಸಿದ್ಧಪಡಿಸಲಾಗಿದ್ದು, ಒಟ್ಟು 100 ಹಾಸಿಗೆಗಳು ಲಭ್ಯ ಇರುತ್ತವೆ. ಪ್ರತೀ ಒಂದು ಕಂಟೇನರ್ʼನಲ್ಲಿ (ಐಸಿಯುನಲ್ಲಿ) ಐದು ಐಸಿಯು ಹಾಸಿಗೆಗಳು ಇವೆ. ಎಲ್ಲ ಮಾಡ್ಯೂಲರ್ ಐಸಿಯುಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯ ಸಿಬ್ಬಂದಿ, ನರ್ಸುಗಳು ಸೇರಿ ಒಟ್ಟು 150 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಕೋವಿಡ್ ಮಾತ್ರವಲ್ಲದೆ ಯಾವುದೇ ರೀತಿಯ ಹೆಲ್ತ್ ಎಮರ್ಜೆನ್ಸಿಯಂಥ ಸಂದರ್ಭಗಳಲ್ಲಿ ಇಂಥ ಮಾಡ್ಯೂಲರ್ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಇವುಗಳನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಿ ಇಡಬಹುದು. ಪ್ರತಿ ಐಸಿಯು ಒಂದರ ಗಾತ್ರ 12.135 X 3.3 X 2.62 ಮೀಟರ್ ಇದ್ದು, ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯ, ಕುಶಲತೆಯನ್ನು ಇವು ಹೊಂದಿರುತ್ತವೆ.
ಹೈ ಸ್ಪೀಡ್ ವೈಫೈ, ಪ್ರತ್ಯೇಕ ಲ್ಯಾನ್ ಕೇಬಲ್, ಎಚ್ಡಿ ಕ್ಯಾಮೆರಾಗಳು, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ, ಪ್ರತ್ಯೇಕ ನೀರು ಮತ್ತು ಒಳಚರಂಡಿ ವ್ಯವಸ್ಥೆ ಪ್ರತಿ ಮಾಡ್ಯೂಲರ್ ಐಸಿಯುಗೂ ಇರುತ್ತದೆ. ಜತೆಗೆ, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ವೈದ್ಯರು ಎಲ್ಲೇ ಇದ್ದರೂ ಸುಲಭವಾಗಿ ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು.
ಲಿಕ್ವಿಡ್ ಆಕ್ಸಿಜನ್ (ದ್ರವರೂಪದ ಆಮ್ಲಜನಕ) ವ್ಯವಸ್ಥೆ ಇರುತ್ತದೆ. ಇದರ ಪ್ರಮಾಣವನ್ನು 2,000 ಲೀಟರುಗಳಿಂದ 8,000 ಲೀಟರಿಗೆ ಹೆಚ್ಚಿಸಲಾಗಿದೆ. ಹವಾನಿಯಂತ್ರಿತ ವ್ಯವಸ್ಥೆ ಜತೆಗೆ, ಶುದ್ಧ ಗಾಳಿ ತುಂಬಿಸಿ ಕಂಪ್ಲೀಟ್ ಏರ್ʼಟೈಟ್ ಮಾಡಲಾಗಿರುತ್ತದೆ. ನಮ್ಮ ದೇಶದಲ್ಲೇ ಇದೇ ಮೊದಲ ಪ್ರಯೋಗ. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು.
ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ.
ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ʼರಿನ್ಯಾಕ್’ ಎಂಬ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿಗೆ ನಾನು ಭೇಟಿ ನೀಡಿ; ಎಲ್ಲ ರೀತಿಯ ಪರಿಶೀಲನೆ ಮಾಡಿದ್ದೇನೆ. ಕಡಿಮೆ ದರದಲ್ಲಿ ತಯಾರಾಗುವಂತೆ ಆ ಸಂಸ್ಥೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೆ. ಇವುಗಳನ್ನು ಜಾಗತಿಕ ಗುಣಮಟ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ.
50 ಮಾಡ್ಯೂಲರ್ ಐಸಿಯುಗಳ ದಾನಿಗಳ ವಿವರ:
1. ಪ್ರಿಸ್ಟೇಜ್ ಸಮೂಹದ ಪ್ರಿಸ್ಟೇಜ್ ಪೌಂಡೇಶನ್-1
2. ಸಲಾಪುರಿಯಾ ಗ್ರೂಪ್-1
3. ಬ್ರಿಗೇಡ್ ಗ್ರೂಪ್-1
4. ಬಾಗಮಾನೆ ಗ್ರೂಪ್-1
5. ಸೋಹಮ್ ವಿದ್ಯುತ್ ಉತ್ಪಾದನಾ ಸಂಸ್ಥೆ-1
6. ಸಾಮಿ ಲ್ಯಾಬ್ಸ್ ಲಿಮಿಟೆಡ್-2
7. ACT ಪೈಬರ್ ನೆಟ್ ಕಂಪನಿ-2
8. ತ್ರಿವೇಣಿ ಟರ್ಬೈನ್ಸ್-1
9. ವೈಷ್ಣವಿ ಗ್ರೂಪ್-1
10. ಎಂಬೆಸಿ ಗ್ರೂಪ್-10 ಲಕ್ಷ ರೂ. ದೇಣಿಗೆ ನೀಡಿದೆ.