ಮಿಡ್ನಾಪುರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಕ್ಷಣವೇ “ಜನ ವಿರೋಧಿ” ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಒತ್ತಾಯಿಸಿದ್ದಾರೆ.
ಪಶ್ಚಿಮ ಮಿಡ್ನಾಪುರ್ ಜಿಲ್ಲೆಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನನ್ನನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ. ಆದರೆ ಬಿಜೆಪಿಯ ದುರಾಡಳಿತವನ್ನು ಮಾತ್ರ ಸಹಿಸಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ.
“ಬಿಜೆಪಿ ಸರ್ಕಾರ (ಕೇಂದ್ರದಲ್ಲಿ) ತಕ್ಷಣವೇ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವೆ ಅಧಿಕಾರದಿಂದ ಕೆಳಗಿಳಿಯಬೇಕು. ರೈತರ ಹಕ್ಕುಗಳನ್ನು ಕಿತ್ತುಕೊಂಡ ನಂತರ ಅದು ಅಧಿಕಾರದಲ್ಲಿ ಉಳಿಯಬಾರದು” ಎಂದಿದ್ದಾರೆ.
ಬಿಜೆಪಿ “ಹೊರಗಿನಿಂದ ಬಂದವರ” ಪಕ್ಷವೆಂದು ವಾಗ್ದಾಳಿ ನಡೆಸಿದ ಟಿಎಂಸಿ ಮುಖ್ಯಸ್ಥೆ, ಕೇಸರಿ ಪಡೆ ಬಂಗಾಳದ ಮೇಲೆ ಹಿಡಿತ ಸಾಧಿಸಲು ಎಂದಿಗೂ ಅವಕಾಶ ನೀಡವುದಿಲ್ಲ ಮತ್ತು ರಾಜ್ಯ ಜನ ಸಹ ಅದಕ್ಕೆ ಅವಕಾಶ ನೀಡಬಾರದು ಎಂದರು.
ಇದೇ ವೇಳೆ ಜೂನ್ ನಂತರ, ತಮ್ಮ ಪಕ್ಷ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದ ನಂತರ ಮುಂದಿನ ವರ್ಷಗಳ ಕಾಲ ಸರ್ಕಾರ ನೀಡುತ್ತಿರುವ ಉಚಿತ ಪಡಿತರವನ್ನು ಮುಂದುವರಿಸುವುದಾಗಿ ಸಿಎಂ ಮಮತಾ ಘೋಷಿಸಿದರು.
Follow us on Social media