Breaking News

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಎರಡು ಪಟ್ಟು ಹೆಚ್ಚಳ: ಮುಂದಿನ 4-6 ವಾರ ನಿರ್ಣಾಯಕ!

ಬೆಂಗಳೂರು: ಓಮಿಕ್ರಾನ್ ಕೊರೋನಾ ರೂಪಾಂತರಿ ಹೆಚ್ಚಳವಾಗುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಿನ್ನೆ ಒಂದೇ ದಿನ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಶೇಕಡಾ 3.33ಕ್ಕೆ ಏರಿಕೆಯಾಗಿದ್ದು ಹೊಸ ಪ್ರಕರಗಳು 24 ಗಂಟೆಗಳಲ್ಲಿ ಹಠಾತ್ತನೆ ಶೇಕಡಾ 71.27ರಷ್ಟು ಹೆಚ್ಚಳವಾಗಿದೆ. ಮೊನ್ನೆ ರಾಜ್ಯದಲ್ಲಿ 2 ಸಾವಿರದ 479 ಕೇಸುಗಳಿದ್ದದ್ದು ನಿನ್ನೆ 4 ಸಾವಿರದ 246ಕ್ಕೆ ಹೆಚ್ಚಳವಾಗಿದೆ. ಅದರಲ್ಲಿ ಶೇಕಡಾ 84.90ರಷ್ಟು ಬೆಂಗಳೂರು ಒಂದರಲ್ಲೇ ಹೆಚ್ಚಳವಾಗಿದ್ದು ರಾಜಧಾನಿಯೊಂದರಲ್ಲಿಯೇ ನಿನ್ನೆ 3 ಸಾವಿರದ 605 ಕೇಸುಗಳು ವರದಿಯಾಗಿದೆ.

ರಾಜ್ಯದ ಸಕ್ರಿಯ ಕೊರೋನಾ ಸೋಂಕಿನ ಪ್ರಮಾಣ ಶೇಕಡಾ 28.68ರಷ್ಟು ಹೆಚ್ಚಾಗಿದ್ದು ಮೊನ್ನೆ ಮಂಗಳವಾರ 13 ಸಾವಿರದ 532 ದಾಖಲಾಗಿದ್ದರೆ ನಿನ್ನೆ 17 ಸಾವಿರದ 414ಕ್ಕೆ ಏರಿಕೆಯಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ಶೇಕಡಾ 29.23ರಷ್ಟು ಹೆಚ್ಚಳ ಕಂಡುಬಂದಿದ್ದು 11 ಸಾವಿರದ 423ರಿಂದ 14 ಸಾವಿರದ 762ಕ್ಕೆ ಏರಿಕೆಯಾಗಿದೆ.

ಮುಂದಿನ 4ರಿಂದ 6 ವಾರಗಳ ಕಾಲ ಜನರು ತೀವ್ರ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ತಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗದಂತೆ ನಿರ್ಬಂಧ ವಿಧಿಸಿದೆ. ಮುಂದಿನ 4ರಿಂದ 6 ವಾರಗಳ ಕಾಲ ನಿರ್ಣಾಯಕವಾಗಿದ್ದು, ಜನರು ಕೋವಿಡ್ ನಿಯಮ, ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಿದ್ದಾರೆ.

ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರೊ.ಶಿವ ಆತ್ರೇಯ, ಬೆಂಗಳೂರಿನ ಐಐಎಸ್‌ಸಿಯ ಪ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ಅವರ ತಂಡದ ಒಮಿಕ್ರಾನ್‌ನಲ್ಲಿನ ಪ್ರಾಥಮಿಕ ಅಂಕಿಅಂಶಗಳನ್ನು ಗಣಿತದ ಮಾದರಿಯಲ್ಲಿ ಅಂದಾಜಿಸಿದ್ದು ಅದರ ಪ್ರಕಾರ, ಕರ್ನಾಟಕದಲ್ಲಿ ದಿನಕ್ಕೆ 40,000 ಪ್ರಕರಣಗಳು ಮತ್ತು ಕೋವಿಡ್ ಮೂರನೇ ಅಲೆ ತೀವ್ರ ಮಟ್ಟಕ್ಕೆ ಹೋದರೆ ದಿನಕ್ಕೆ ಸುಮಾರು 1.2 ಲಕ್ಷ ಸೋಂಕಿತರ ಸಂಖ್ಯೆ ವರದಿಯಾಗಬಹುದು ಎನ್ನುತ್ತಾರೆ.

ಈ ಜನಸಂಖ್ಯೆಯ 1 ಪ್ರತಿಶತದಷ್ಟು ಜನರು ಆಸ್ಪತ್ರೆಗೆ ದಾಖಲಾದರೆ, ದಿನಕ್ಕೆ ಸುಮಾರು 400 ರಿಂದ 1,200 ದಾಖಲಾತಿಗಳು ಆಗಬಹುದು ಎಂದು ಅಂದಾಜಿಸಲಾಗಿದೆ.

ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಗಿರಿಧರ ಬಾಬು ಆರ್, “ಪ್ರೊ.ಆತ್ರೇಯಾ ಮತ್ತು ಪ್ರೊ.ಸುಂದರೇಶನ್ ಅವರು ಪ್ರಸ್ತುತಪಡಿಸಿದ ಮಾದರಿ ಫಲಿತಾಂಶಗಳ ಆಧಾರದ ಮೇಲೆ, ಜನವರಿ ಕೊನೆಯ ವಾರದಿಂದ ಫೆಬ್ರವರಿ ಮೊದಲ ವಾರದಲ್ಲಿ ಕೊರೋನಾ ಉಲ್ಬಣಗೊಳ್ಳುವ ಸಾಧ್ಯತೆಯಿದೆ.  ನಿನ್ನೆಯಿಂದ ರಾಜ್ಯಸರ್ಕಾರ ವಿಧಿಸಿರುವ ನಿರ್ಬಂಧಗಳು ಪರಿಣಾಮಕಾರಿ ಎಂದು ಭಾವಿಸಿದರೆ, ಡೆಲ್ಟಾ ಅಲೆಗೆ ಹೋಲಿಸಿದರೆ ಓಮಿಕ್ರಾನ್ ಸೋಂಕಿನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿರಬಹುದು ಎನ್ನುತ್ತಾರೆ. 

ಹಾಗೆಂದು, ಓಮಿಕ್ರಾನ್ ರೂಪಾಂತರದ ಸೋಂಕಿಗೆ ಲಸಿಕೆ ಹಾಕಬೇಕೆಂದಿಲ್ಲ ಎಂಬ ತಪ್ಪು, ಸುಳ್ಳು ಮಾಹಿತಿಯಿಂದ ಜನರು ದೂರವಿರಬೇಕು. ಸೋಂಕಿಗೆ ಒಳಗಾಗುವುದನ್ನು ಆದಷ್ಟು ತಪ್ಪಿಸಬೇಕು ಎನ್ನುತ್ತಾರೆ.

WHO ಮುಖ್ಯ ವಿಜ್ಞಾನಿ ಡಾ ಸೌಮ್ಯಾ ಸ್ವಾಮಿನಾಥನ್, ಭಾರತದಲ್ಲಿನ ಓಮಿಕ್ರಾನ್ ಪರಿಸ್ಥಿತಿಯ ಕುರಿತು ಟ್ವೀಟ್ ಮಾಡಿದ್ದಾರೆ. ಓಮಿಕ್ರಾನ್ ಸಾಮಾನ್ಯ ಶೀತವಲ್ಲ, ನಿರ್ಲಕ್ಷಿಸಿದರೆ ಆರೋಗ್ಯ ವ್ಯವಸ್ಥೆ ಪದಗೆಡಬಹುದು. ಉಲ್ಬಣವು ಹಠಾತ್ ಮತ್ತು ದೊಡ್ಡದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ಪರೀಕ್ಷಿಸಲು, ಸಲಹೆ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ದೇಶಗಳು ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವುದು ಮುಖ್ಯವಾಗಿದೆ ಎನ್ನುತ್ತಾರೆ. 

ಬಾಲಕಿ ಸಾವು, ಬೆಂಗಳೂರಿನಲ್ಲಿ ಕಂಟೈನ್ ಮೆಂಟ್ ವಲಯ ಹೆಚ್ಚಳ: ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ಸುದ್ದಿಯ ನಡುವೆ ರಾಜಧಾನಿ ಬೆಂಗಳೂರಿನಲ್ಲಿ 15 ವರ್ಷದ ಬಾಲಕಿ ಕೋವಿಡ್ ಪಾಸಿಟಿವ್ ಬಂದು ತೀರಿಕೊಂಡಿದ್ದಾಳೆ.

ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಬಾಲಕಿ ಮೃತಪಟ್ಟಿದ್ದು ಕೋವಿಡ್ ಸೋಂಕಿನಿಂದ ಅಲ್ಲ. ಬೇರೆ ಆರೋಗ್ಯ ಸಮಸ್ಯೆಗಳಿಂದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ಕರ್ನಾಟಕ ಆರೋಗ್ಯ ಇಲಾಖೆಯ ಆರೋಗ್ಯ ಬುಲೆಟಿನ್ ಪ್ರಕಾರ, ಬಾಲಕಿಗೆ ಜ್ವರದ ಲಕ್ಷಣಗಳೊಂದಿಗೆ ಇನ್ಫ್ಲುಯೆನ್ಸ ತರಹದ ಅನಾರೋಗ್ಯದ ಲಕ್ಷಣಗಳಿದ್ದವು. ಬೆಂಗಳೂರಿನ ನಿವಾಸಿಯಾಗಿದ್ದ ಬಾಲಕಿ ಕೆಲವು ರೋಗಗಳು, ಅಸ್ವಸ್ಥತೆಯಿಂದ ಬಳಲುತ್ತಿದ್ದಳು. 

ಬಾಲಕಿಗೆ ಕಳೆದೊಂದು ವರ್ಷದಿಂದ ಆಗಾಗ ತಲೆನೋವು ಬರುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಾಗಿದ್ದಳು. ಮೊನ್ನೆ ಜನವರಿ 3ರಂದು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು, ಅಲ್ಲಿ ಮೆದುಳಿನ ಸಮಸ್ಯೆಗಳು ತಲೆದೋರಿದವು.

ಐಸಿಯುನಲ್ಲಿದ್ದಾಗ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಮಧ್ಯೆ, ಬೆಂಗಳೂರು ನಗರದಲ್ಲಿ ಒಟ್ಟು ಸೂಕ್ಷ್ಮ ಕಂಟೈನ್ ಮೆಂಟ್ ವಲಯಗಳು 182ಕ್ಕೇರಿವೆ. ಮಹದೇವಪುರದಲ್ಲಿ 57, ಬೊಮ್ಮನಹಳ್ಳಿಯಲ್ಲಿ 53 ಮತ್ತು ಪಶ್ಚಿಮ ವಲಯದಲ್ಲಿ 20 ದಾಖಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×