ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಸೋಂಕು ಸಮುದಾಯ ಹಂತಕ್ಕೆ ಹಬ್ಬಿರಬಹುದು ಎಂದು ಬಹುಶಃ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿರಬೇಕು. ಯಾವುದೇ ಪ್ರಯಾಣ ಅಥವಾ ಪ್ರಯಾಣ ಮಾಡಿ ಬಂದವರ ಸಂಪರ್ಕವಿಲ್ಲದವರಿಗೂ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕು ಬರುತ್ತಿದ್ದು, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರನ್ನು ಕೇಳಿದಾಗ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ ಸಮುದಾಯಕ್ಕೆ ಸೋಂಕು ಪ್ರಸರಣವಾಗಿರುವ ಪ್ರಕರಣಗಳಿರಬಹುದು, ಆದರೆ ಅದು ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.
ಸಮುದಾಯ ಮಟ್ಟಕ್ಕೆ ಸೋಂಕು ಪ್ರಸರಣವಾಗಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಬೇರೆ ಕೆಲವು ರಾಜ್ಯಗಳಂತೆ ಗಮನಾರ್ಹ ಹೆಚ್ಚಿನ ಮಟ್ಟದಲ್ಲಿ ಸೋಂಕು ಪ್ರಸರಣವಾಗಿದೆ ಎಂದು ನಾನು ಹೇಳುವುದಿಲ್ಲ ಎಂದರು. ಹಾಗಾದರೆ ಇತ್ತೀಚಿನ ದಿನಗಳಲ್ಲಿ ಸೋಂಕು ಇಷ್ಟೊಂದು ವ್ಯಾಪಕವಾಗಿ ಹಬ್ಬಿದ್ದು ಎಲ್ಲಿಂದ, ಮೂಲ ಯಾವುದು ಎಂದು ಕೇಳಿದ್ದಕ್ಕೆ ಸೋಂಕು ಹರಡುತ್ತಿರುವ ಮೂಲ ಇನ್ನೂ ಪತ್ತೆಯಾಗಿಲ್ಲ ಎಂದರು. ಮೊನ್ನೆ ಗುರುವಾರ ಪತ್ತೆಯಾದ 11 ಸಾವಿರದ 005 ಕೇಸುಗಳಲ್ಲಿ 1,817 ಕೇಸುಗಳ ಮೂಲ ಎಲ್ಲಿಂದ ಎಂದು ಗೊತ್ತಾಗಿಲ್ಲ.
ಅಗತ್ಯವಿದ್ದರೆ ವೈದ್ಯರು, ದಾದಿಯರನ್ನು ನೇಮಕ ಮಾಡಿ: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ, ಬಿಬಿಎಂಪಿ, ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಯ ನಿರ್ದೇಶಕರು, ರಾಜೀವ್ ಗಾಂಧಿ ಹೃದ್ರೋಗ ಮತ್ತು ಇತರ ಆರೋಗ್ಯ ಕ್ಷೇತ್ರಗಳ ತಜ್ಞರೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಮತ್ತು ದಾದಿಯರು ಇರುವಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ನೇಮಕಾತಿ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇವೆಗೆ ನಿಯೋಜಿಸಿಕೊಳ್ಳುವಂತೆ ಸಚಿವರು ಇದೇ ಸಂದರ್ಭದಲ್ಲಿ ಸೂಚಿಸಿದರು.
ಐಸಿಯು ಮತ್ತು ಉತ್ತಮ ಆಕ್ಸಿಜನ್ ಪೂರೈಕೆಯನ್ನು ಹೊಂದಿರುವ ವಾರ್ಡ್ ಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯಿರಬೇಕು. ಕೋವಿಡ್ ಕೇರ್ ಕೇಂದ್ರಗಳು ಮತ್ತು ಸಾಮಾನ್ಯ ವಾರ್ಡ್ ಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಿದರೆ ಅವರನ್ನು ಇಂತಹ ವಿಶೇಷ ವಾರ್ಡ್ ಗಳಿಗೆ ಕಳುಹಿಸಬಹುದು. ಆಯುಷ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ನಿಯೋಜಿಸಲಾಗುವುದು. ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Follow us on Social media