ಬೆಂಗಳೂರು: ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರಂತರವಾಗಿ ಮಳೆಯ ಆರ್ಭಟ ಮುಂದುವರೆದಿದ್ದು, ಪ್ರಮುಖ ನದಿ, ಕೆರೆಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಪ್ರವಾಹ ಭೀತಿ ಶುರುವಾಗಿದೆ.
ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು, ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕಾವೇರಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಮತ್ತು ಮೈಸೂರು ಜಿಲ್ಲಾಡಳಿತ ಮಂಡಳಿಯು ತಗ್ಗು ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದಾರೆನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿ ಸಂಪೂರ್ಣವಾಗಿ ತುಂಬಿ ಹರಿದು ಕುಕ್ಕೆ ಸುಬ್ರಹ್ಮಣ್ಯ, ಸ್ನಾನಘಟ್ಟ ಮುಳುಗಿದೆ. ಮಂಗಳೂರು ಹೊರವಲಯದ ಕುಲಶೇಖರ-ಕಾವೂರು ರಸ್ತೆಯಲ್ಲಿ ಮರ ಬಿದ್ದು ವಾಹನ ಜಖಂಗೊಂಡಿದೆ.
ಉಡುಪಿಯಲ್ಲಿ ಪ್ರಮುಖ ನದಿಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇತಿಹಾಸ ಪ್ರಸಿದ್ಧ ಕುಂದಾಪುರ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದರೆ, ಮನೆಗಳು, ಜಮೀನಿನ ಬೆಳೆಗಳು ನಾಶವಾಗಿವೆ. ಇನ್ನು ಸಮುದ್ರ ತೀರದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಇನ್ನೆರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕಿಳಿಯಂದೆತ ಸೂಚಿಸಲಾಗಿದೆ.
ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು, ಅಡಿಕೆ ಬೆಳೆಗಳು, ಮರಗಳು ಬಿದ್ದು ಹಲವೆಡೆ ಬಿದ್ದ ವಿದ್ಯುತ್ ಸರಬರಾಜು ಕಡಿತವಾಗಿದೆ. ಇನ್ನು ಶೃಂಗೇರಿಯ ತುಂಗಾನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ನೀರಿನಲ್ಲಿ ಮುಳುಗಿದೆ. ತುಂಗಾನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ತುಂಗಾ,ಭದ್ರಾ, ಶರಾವತಿ ನದಿಗಳಿಗೆ ಜೀವಕಳೆ ಬಂದಿದ್ದು, ಗಾಜನೂರು ಅಣೆಕಟ್ಟೆಯಲ್ಲಿ 21 ಕ್ರೆಸ್ಟ್ ಗೇಟ್ ತೆರೆಯುವ ಮೂಲಕ 45 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಅಪಾಯ ಮಟ್ಟದಲ್ಲಿ ತುಂಗೆ ಹರಿಯುತ್ತಿದ್ದು, ಜನರು ಸುರಕ್ಷಿರಾಗಿರುವಂತೆ ಸೂಚಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.
Follow us on Social media