ತುಮಕೂರು: ಎಸ್ಎಸ್ಎಲ್ ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 900 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಆಂಧ್ರಪ್ರದೇಶದ ಕರ್ನೂಲ್ ಮೂಲದ ಈ ವಿದ್ಯಾರ್ಥಿ ಲಾಕ್ ಡೌನ್ ನಂತರ ಊರಿಗೆ ತೆರಳಿದ್ದನು. ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಜೂನ್ 15 ರಂದು ಮತ್ತೆ ವಾಪಸ್ ಮಠಕ್ಕೆ ಬಂದಿದ್ದು, ಕರ್ನೂಲ್ ನಲ್ಲಿ ಕೊವಿಡ್ -19 ರ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಗಂಟಲಿನ ಸ್ವ್ಯಾಬ್ ಮಾದರಿಯನ್ನು ಪರೀಕ್ಷಿಸಲಾಗಿದೆ. ಇಂದು ಪಾಸಿಟಿವ್ ವರದಿ ಬಂದಿದೆ.
ವಿದ್ಯಾರ್ಥಿಯನ್ನು ನಿಗದಿತ ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೊಮ್ಮೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವಿದ್ಯಾರ್ಥಿಗೆ ಯಾವುದೇ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಎರಡನೇ ಪರೀಕ್ಷೆಯ ವರದಿ ಇನ್ನು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿದ್ಯಾರ್ಥಿಯ ರೂಮ್ ನಲ್ಲಿದ್ದ ಇತರೆ ಮೂವರು ವಿದ್ಯಾರ್ಥಿಗಳನ್ನು ಮಠದ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಲಾಕ್ ಡೌನ್ ಜಾರಿಗೊಳಿಸಿದ ನಂತರ ಮಠದಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಕೇವಲ 150 ವಿದ್ಯಾರ್ಥಿಗಳು ಮಾತ್ರ ಮಠದಲ್ಲಿದ್ದರು. ಆದರೆ ಜೂನ್ 25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ 750 ಮಕ್ಕಳು ಮತ್ತೆ ಹಾಸ್ಟೆಲ್ ಗೆ ಬಂದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ವಾಸ ಮಾಡುತ್ತಿದ್ದು, ಒಂದೇ ಬಾತ್ ರೂಂ ಮತ್ತು ಶೌಚಾಲಯಗಳನ್ನು ಬಳಸಿದ್ದಾರೆ.
Follow us on Social media