ಬೆಂಗಳೂರು: ಕೊರೋನಾದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಂದೂಡಿಕೆಯಾಗಿರುವುದರಿಂದ ಪರೀಕ್ಷೆ ಬರೆಯಲು ಆತಂಕದಿಂದ ಕಾಯುತ್ತಿರುವ ಮಕ್ಕಳಿಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಏ. 29ರಿಂದ ಪುನರ್ಮನನ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ತಿಳಿಸಿದ್ದಾರೆ.
ಈ ಕಾರ್ಯಕ್ರಮ ಏ.29ರಿಂದ ಪ್ರತಿ ದಿನ ಮಧ್ಯಾಹ್ನ 3ರಿಂದ 4.30ರವರೆಗೆ ನಡೆಯಲಿದ್ದು, ನುರಿತ ಶಿಕ್ಷಕರು ವಿಷಯವಾರು ಬೋಧನೆ ಮಾಡಲಿದ್ದಾರೆ. ಮೊದಲ 16 ದಿನ ಪ್ರತಿ 45 ನಿಮಿಷಯಗಳ ಎರಡು ಅವಧಿಗಳಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯಗಳ ಬೋಧನಾ ತರಗತಿಗಳು ನಡೆಯಲಿದ್ದು, 17ನೇ ದಿನ ಈ ಎರಡೂ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
18ನೇ ದಿನದಿಂದ ಸಮಾಜ ವಿಜ್ಞಾನದ ತರಗತಿಗಳು 6 ದಿನಗಳ ಅವಧಿಗೆ ನಡೆಯಲಿದ್ದು, ನಂತರದ ದಿನಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ವಿಷಯಗಳ ಬೋಧನೆಯನ್ನೂ ಸಹ ಮಾಡಲಾಗುತ್ತದೆ. ಪ್ರತಿ ವಿಷಯ ಬೋಧನೆಯ ಕೊನೆಯಲ್ಲಿ ವಿಶೇಷವಾಗಿ ತಯಾರಿಸಲಾಗಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನವನ್ನು ಹೇಳಿಕೊಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Source : UNI
Follow us on Social media