ಮಂಗಳೂರು: ಕೇಂದ್ರ ಸರ್ಕಾರದ ಎನ್‌ಸಿಐಬಿ ನಿರ್ದೇಶಕ ಎಂಬ ಸೋಗು ಹಾಕಿಕೊಂಡು ಮಂಗಳೂರಿನಲ್ಲಿ ದೊಡ್ಡ ಬ್ಲಾಕ್‌ಮೇಲ್, ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಎಂಟು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಯಿಲಾಡ್ ಕಾವನಾಡ ನಿವಾಸಿ ಟಿ.ಸ್ಯಾಮ್ ಪೀಟರ್(53), ಮಡಿಕೇರಿ ತಾಲೂಕು ಅರೇಕಳ ಗ್ರಾಮದ ಟಿ.ಬಿ.ಕಾವೇರಪ್ಪ ಎಂಬವರ ಮಗ ಟಿ.ಕೆ.ಬೋಪಣ್ಣ(33), ಬೆಂಗಳೂರು ನೀಲಸಂದ್ರದ ಎಂ.ಆರ್.ಮನೋಹರನ್ ಎಂಬವರ ಮಗ ಮದನ್(41) , ಕೊಡಗಿನ ವೀರಾಜಪೇಟೆಯ ನಾಲ್ಕೇರಿ ಗ್ರಾಮದ ಪೂಣಚ್ಚ ಎಂಬವರ ಮಗ ಚಿನ್ನಪ್ಪ(38), ಬೆಂಗಳೂರು ಕಲಘಟಪುರ ಪಿಳ್ಳಿಕಾಮ ದೇವಸ್ಥಾನ ಬಳಿಯ ಸಿದ್ಧರಾಜು ಎಂಬವ ಮಗ ಸುನೀಲ್ ರಾಜು(35), ಬೆಂಗಳೂರು ಉತ್ತರಹಳ್ಳಿ ಸಿರಿ ಎಕ್ಸೋಟಿಕಾ ನಿವಾಸಿ ಬಸವರಾಜಯ್ಯ ಎಂಬವರ ಮಗ ಕೋದಂಡರಾಮ(39), ಕೂಳೂರು ಕಾರ್ಪೊರೇಶನ್ ಕಚೇರಿ ಬಳಿಯ ಅಬ್ದುಲ್ ಖಾದರ್ ಎಂಬವರ ಮಗ ಜಿ.ಮೊಯಿದ್ದಿನ್ ಅಲಿಯಾಸ್ ಚರಿಯನ್(70) ಮತ್ತು ಫಳ್ನೀರಿನ ಮೊಹಮ್ಮದ್ ಎಂಬವರ ಮಗ ಎಸ್.ಎ.ಕೆ.ಅಬ್ದುಲ್ ಲತೀಫ್(59) ಬಂಧಿತರು.
ಆರೋಪಿಗಳಿಂದ ಒಂದು ರಿವಾಲ್ವರ್ ಹಾಗೂ 8 ಸಜೀವ ಬುಲೆಟ್ಸ್, ಒಂದು ಏರ್‌ಪಿಸ್ಟಲ್, 10 ಮೊಬೈಲ್ ಫೋನ್ ವಶಪಡಿಸಲಾಗಿದೆ.
ಆರೋಪಿಗಳು ಮಂಗಳೂರಿನ ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ಎರಡು ದಿನಗಳಿಂದ ತಂಗಿದ್ದರು. ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೊದ ಲಾಂಛನ ಹೊಂದಿದ ನಂಬರ್‌ಪ್ಲೇಟ್ ಇಲ್ಲದ ಟಿಯುವಿ ವಾಹನದಲ್ಲಿ ತಿರುಗುತ್ತಿದ್ದರು.
ಉಗ್ರದಾಳಿಯ ಹೈಅಲರ್ಟ್ ರಾಜ್ಯಾದ್ಯಂತ ಘೋಷಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿನಲ್ಲಿಯೂ ಪೊಲೀಸರು ಬಿಗಿ ಭದ್ರತೆ ನಡೆಸಿದ್ದ ವೇಳೆ ಈ ವಾಹನ ಪತ್ತೆಯಾಗಿದ್ದು ಆರೋಪಿಗಳನ್ನು ಒಟ್ಟಿಗೆ ವಶಕ್ಕೆ ಪಡೆಯಲಾಯಿತು.
Follow us on Social media