ಬೆಂಗಳೂರು: ನಮ್ಮ ಸರ್ಕಾರಿ ಶಾಲೆಗಳಲ್ಲಿನ ಉತ್ತಮ ಆಡಳಿತ ವ್ಯವಸ್ಥೆ ಮತ್ತು ಶೈಕ್ಷಣಿಕ ನಿರ್ವಹಣೆಯಲ್ಲಿನ ವಿಶೇಷ ಸಾಧನೆಯನ್ನು ಗುರುತಿಸಿ ಈ ವರ್ಷದಿಂದಲೇ ರಾಜ್ಯಮಟ್ಟದಲ್ಲಿ ‘ಸ್ವಾಭಿಮಾನಿ ಸರ್ಕಾರಿ ಶಾಲೆ’ ಎಂಬ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕೊರೋನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣದ ಮೂಲಕ ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಇಂದು ರಾಜ್ಯದ ಸರ್ಕಾರಿ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರು/ ಸದಸ್ಯರೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿರುವ ಮೂಲಸೌಲಭ್ಯಗಳು, ಶೈಕ್ಷಣಿಕ ಪ್ರಗತಿ, ಸಮುದಾಯದ ಸಹಭಾಗಿತ್ವ, ಶಾಲೆಗಳ ಸರ್ವಾಂಗೀಣ ಪ್ರಗತಿಯಲ್ಲಿ ಎಸ್‍ಡಿಎಂಸಿ-ಶಿಕ್ಷಕರ ಅನ್ಯೋನ್ಯ ಸಂಬಂಧಗಳು ಸೇರಿದಂತೆ ಹಲವು ಆಯಾಮಗಳಲ್ಲಿ ನಮ್ಮ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಅಳೆದು ಈ ಸಾಲಿನಿಂದ ಪ್ರಗತಿಯಲ್ಲಿ ಅದ್ವಿತೀಯ ಸಾಧನೆಯನ್ನು ಗುರುತಿಸಲಾಗುವುದು ಎಂದರು.
ಅದೇ ರೀತಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ನಮ್ಮ ಶಿಕ್ಷಕರ ನವೀನ ಶೈಕ್ಷಣಿಕ ಪ್ರಯೋಗಗಳನ್ನು ಗುರುತಿಸಿ ವಿದ್ಯಾರ್ಥಿ ಗಳ ಕಲಿಕೆಯಲ್ಲಿ ಸೃಜನಶೀಲತೆ ಬೆಳೆಸಲು ಪ್ರೇರೇಪಿಸುವ ಅತ್ಯುತ್ತಮ ಯೋಜನೆಯನ್ನು ಸಹ ಈ ಸಾಲಿನಿಂದ ಜಾರಿಗೆ ತರಲಾಗುತ್ತಿದೆ ಎಂದರು. ನಮ್ಮಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ನಮ್ಮ ಶಿಕ್ಷಕರ ಸೇವೆಯನ್ನು ಗುರುತಿಸಿ ನಮ್ಮ ವಿದ್ಯಾರ್ಥಿಗಳ ಕಲಿಕೆಗೆ ಬಳಸಿ ಕೊಳ್ಳುವ ಉದ್ದೇಶ ಹೊಂದಲಾಗಿದ್ದು, ನಮ್ಮಲ್ಲಿ ಒಂದು ಧನಾತ್ಮಕವಾದ ಸ್ಪರ್ಧಾತ್ಮಕ ಸ್ಪೂರ್ತಿ ಮೂಡಿದಲ್ಲಿ ನಾವು ನೀವೆಲ್ಲರೂ ಕೊರೋನಾದಂತಹ ಸಂಕಷ್ಟದ ಸಮಯವನ್ನು ಸಮರ್ಥವಾಗಿ ದಾಟಬಹುದಾಗಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳ 40ಕ್ಕೂ ಎಸ್ ಡಿಎಂಸಿ. ಅಧ್ಯಕ್ಷರು/ ಸದಸ್ಯ ಪ್ರತಿನಿಧಿಗಳು ಭಾಗವಹಿಸಿದ ವೆಬಿನಾರ್‍ನಲ್ಲಿ ಕೊರೋನಾ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಮಾಡಬಹುದಾದ ಮತ್ತು ತಮ್ಮ ತಮ್ಮ ವ್ಯಾಪ್ತಿ ಯಲ್ಲಿ ತಾವು ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.
ಎಸ್.ಡಿ.ಎಂ.ಸಿ. ಸಮಿತಿಗಳು ನಮ್ಮ ಶಾಲೆಗಳಿಗೆ ಹಾಗೂ ಶೈಕ್ಷಣಿಕ ವ್ಯವಸ್ಥೆಗೆ ನಿಜವಾದ ಪ್ರಜಾಪ್ರಭುತ್ವದ ಶಕ್ತಿಯನ್ನು ಕಲ್ಪಿಸುತ್ತವೆ. ಈ ಸಂದರ್ಭದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಈಗ ಹೇಗೆ ಅನಿವಾರ್ಯವಾಗಿದೆಯೋ ಆ ವ್ಯವಸ್ಥೆಯ ಮೂಲ ಸತ್ವ ನಮ್ಮ ಎಸ್‍ಡಿ ಎಂಸಿಗಳೇ ಆಗಿರುವುದರಿಂದ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಈ ಸಮಿತಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಅವರು ವಿವರಿಸಿದರು.
ಈ ಎಲ್ಲ ಸಾಮೂಹಿಕವಾದ ಪ್ರಯತ್ನಗಳು ಗಟ್ಟಿ ರೂಪ ಪಡೆದು ವಿಕೇಂದ್ರಿಕೃತ ಕಲಿಕೆಯು ಮಕ್ಕಳಿಗೆ ಉಪಯುಕ್ತವಾಗುವ ರೀತಿಯ ಲ್ಲಿ ನಮ್ಮ ಪ್ರಯತ್ನಗಳು ಇರಬೇಕೆನ್ನುವ ಅಭಿಪ್ರಾಯಗಳು ನಾವು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬ ಹುದಾದ ನಿರ್ಣಯಗಳಿಗೆ ಒಂದು ಸ್ಪಷ್ಟ ದಿಕ್ಕನ್ನು ಮೂಡಿಸಿವೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ತಾವು ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದ ಸುರೇಶ್‍ಕುಮಾರ್, ಇಂದು ವ್ಯಕ್ತವಾದ ಸರ್ವಸಮ್ಮತ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಉತ್ತಮವಾದ ಸಲಹೆಗಳನ್ನು ಶೈಕ್ಷಣಿಕ ಚಟುವಟಿಕೆಯ ನಿರಂತರತೆಯ ಸಂಬಂಧದಲ್ಲಿ ರೂಪಿಸುತ್ತಿರುವ ‘ವಿದ್ಯಾಗಮ’ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾ ಗುವುದು ಎಂದರು.
ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ನಾವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ನಿರೀಕ್ಷಿಸುತ್ತಿದ್ದು,ಅದ ರನ್ವಯ ನಮ್ಮ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲಕರವಾಗುವ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು. ಈ ಎಲ್ಲ ಸಲಹೆಗಳನ್ನು ಕ್ರೂಢೀಕರಿಸಿ ದಾಖಲಿಸಿ ಆಯಾ ಸಂದರ್ಭ,ಆಯಾ ಪ್ರದೇಶಕ್ಕನುಗುಣವಾಗಿ ಜಾರಿಯಲ್ಲಿಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ನಮ್ಮ ಮಕ್ಕಳ ಭವಿಷ್ಯವನ್ನು ನಮ್ಮ ಶಾಲಾಭಿವೃದ್ಧಿ ಮೇಲಸ್ತುವಾರಿ ಸಮಿತಿಗಳು ರೂಪಿಸುವುದ ರಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಸ್ಥಳೀಯವಾಗಿ ಯಾವುದೇ ನಾವಿನ್ಯ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರದ ಸ್ವಾಗತವಿದೆ. ಅನುದಾನ ಲಭ್ಯತೆಯ ಇತಿಮಿತಿಯಲ್ಲಿ ಎಸ್.ಡಿ.ಎಂ.ಸಿ.ಗಳ ಸಬಲೀಕರಣಕ್ಕಾಗಿ ಸರ್ಕಾರವು ಪ್ರಾಮಾಣಿಕ ಕ್ರಮಗಳನ್ನು ಜಾರಿಯಲ್ಲಿಡುತ್ತದೆ ಎಂದೂ ಸುರೇಶ್ ಕುಮಾರ್ ಹೇಳಿದರು.
ಸಂವಾದದಲ್ಲಿ ಭಾಗವಹಿಸಿದ್ದ ಅಧ್ಯಕ್ಷರು/ಸದಸ್ಯರು ಈ ಸಂಕಷ್ಟದ ಅವಧಿಯಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಶೈಕ್ಷಣಿಕ ನಿರಂತರತೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರಲ್ಲದೇ ಮುಂದೆ ಈ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
ಮಕ್ಕಳ ಕಲಿಕೆಯ ನಿರಂತರತೆಗೆ ವಠಾರ ಶಾಲೆ, ಪಡಸಾಲೆ ಶಾಲೆ,ಮನೆಶಾಲೆ,ತಂತ್ರಜ್ಞಾನಾಧಾರಿತ ಶಿಕ್ಷಣ,ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ,ಖಾಸಗಿ ವಾಹಿನಿ,ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಎಸ್‍ಡಿಎಂಸಿಗಳು ಬಹುತೇಕ ಸದಸ್ಯರು ಹೆಚ್ಚಿನ ಕಾಲ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳು ಶೈಕ್ಷಣಿಕ ವಾತಾವರಣದಿಂದ ವಿಮುಖವಾಗುವ ಸಾಧ್ಯತೆಯಿದ್ದು,ಸಾಧ್ಯವಾದಷ್ಟು ಬೇಗ ಮಕ್ಕಳನ್ನು ಕಲಿಕೆಗೆ ತೊಡಗಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಂವಾದದಲ್ಲಿ ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಭಾಗವಹಿಸಿದ್ದರು.
Follow us on Social media