ಬೆಂಗಳೂರು: ಕೊರೋನಾ ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಜವಾಬ್ದಾರಿ ಮರೆತು ಮಕ್ಕಳೊಂದಿಗೆ ಈಜುಕೊಳದಲ್ಲಿ ಮೋಜು ಮಾಡುತ್ತಿರುವ ವೈದ್ಯಕೀಯ ಸಚಿವ ಸುಧಾಕರ್ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೂಡಲೇ ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸುಧಾಕರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಸುಧಾಕರ್ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಈಜುಕೊಳದಲ್ಲಿ ಈಜುತ್ತಿದ್ದಾರೆ. ಇದು ನೈತಿಕತೆ ಮತ್ತು ಸೈದ್ಧಾಂತಿಕ ಶ್ರೇಷ್ಠತೆಯ ವಿಚಾರ. ಕೂಡಲೇ ಸಚಿವ ಸುಧಾಕರ್ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಸುಧಾಕರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವೈ.ಪುಟ್ಟರಾಜು ಕೂಡ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಸುಧಾಕರ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸುಧಾಕರ್ ಅವರು ಭಾನುವಾರ ತಮ್ಮ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟವಾಡುವ ಚಿತ್ರವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಬಹಳ ಕಾಲದ ನಂತರ ಮಕ್ಕಳೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಾಲ ಕಳೆಯುತ್ತಿದ್ದೇನೆ. ಇಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತೇನೆ..ಹ..ಹ ಹ’ ಎಂದು ಬರೆದುಕೊಂಡಿದ್ದರು.
ಈ ಚಿತ್ರಕ್ಕೆ ಸಾರ್ವಜನಿಕರಿಂದ ಭಾರಿ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸುಧಾಕರ್ ಆ ಟ್ವೀಟ್ ಅನ್ನು ತೆಗೆದುಹಾಕಿದ್ದರು.
ಆದರೆ, ಆ ಚಿತ್ರವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವ ಶಿವಕುಮಾರ್, ‘ಜಗತ್ತೇ ಆರೋಗ್ಯದ ಸಂಕಷ್ಟ ಎದುರಿಸುತ್ತಿರುವಾಗ, ಕೊರೋನಾ ಉಸ್ತುವಾರಿ ಸಚಿವರು ಈಜುಕೊಳದಲ್ಲಿ ಕಾಲಕಳೆಯುತ್ತಾ ಬೇಜವಾಬ್ದಾರಿಯ ವರ್ತನೆ ತೋರಿದ್ದರು. ಇದು ನೈತಿಕ ಗುಣಮಟ್ಟದ ಪ್ರಶ್ನೆಯಾಗಿದೆ. ಅವರು ತಮ್ಮ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು’ ಎಂದು ಒತ್ತಾಯಿಸಿದ್ದಾರೆ.