ಬೆಂಗಳೂರು : ಪದವಿ ಪೂರ್ವ ಶಿಕ್ಷಣದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಿಬಿಎಸ್ಇ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳು ಆಂಗ್ಲಭಾಷೆಯಲ್ಲಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಎನ್ ಇ ಎಸ್ ಆರ್ ಟಿ ಸಿ ಪುಸ್ತಕಗಳನ್ನು ಮೊದಲಬಾರಿ ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪಿಯು ಇಲಾಖೆಯ ಸಭಾಂಗಣದಲ್ಲಿ ಮಾತನಾಡಿದ ಅವರು, ಹತ್ತನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಅವತರಣಿಕೆಗಳನ್ನು ಬಿಡುಗಡೆ ಮಾಡಲಾಗಿದ್ದು, ಇದೊಂದು ಇಲಾಖೆಯ ಪ್ರಮುಖ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಕಲಾ ವಿಭಾಗದ ವಿದ್ಯಾರ್ಥಿಗಳು ಮಾತ್ರವೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಆದರೆ ಪಿಸಿಎಂಬಿ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಪುಸ್ತಕಗಳು ಇಲ್ಲವಾದ್ದರಿಂದ ಅವರಿಕೆ ಕಷ್ಟವಾದರೂ ಇಂಗ್ಲಿಷ್ನಲ್ಲೇ ಬರೆಯಬೇಕಿತ್ತು. ಈಗ ಪುಸ್ತಕಗಳು ಕನ್ನಡ ಮಾಧ್ಯಮದಲ್ಲಿ ದೊರೆಯುವ ಅವಕಾಶವಾಗಿರುವುದರಿಂದ ಪಿಸಿಎಂಬಿ ವಿದ್ಯಾರ್ಥಿಗಳೂ ಇನ್ನು ಮುಂದೆ ಕನ್ನಡದಲ್ಲಿ ಬರೆಯಬಹುದಾಗಿದ್ದು, ಉಪನ್ಯಾಸಕರೂ ಕೂಡ ಕನ್ನಡದಲ್ಲಿ ಬೋಧಿಸಲು ಸಹಾಯಕವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಈ ಕಾರ್ಯವನ್ನು ಯಶಸ್ವಿಯಾಗಲು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಒಂದೊಂದರಂತೆ 4 ವಿವಿಧ ಸಮಿತಿಗಳನ್ನು ರಚಿಸಿ ಪಠ್ಯವನ್ನು ಪೂರ್ಣವಾಗಿ ಕನ್ನಡಕ್ಕೆ ಭಾಷಾಂತರಿಸಿ ಪುನರ್ ಪರಿಶೀಲಿಸಿ ಮುದ್ರಣ ಕಾರ್ಯವನ್ನು ಪೂರ್ಣಗೊಳಿಸಿದೆ. ಇನ್ನು ವಿಜ್ಞಾನ ವಿಭಾಗ ಹೊಂದಿರುವ ರಾಜ್ಯದ 650 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಗ್ರಂಥಾಲಯಗಳಿಗೆ ಒಂದು ಸೆಟ್ ಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ಈ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಲ್ಲಿ ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ನೀಟ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳು ಆಂಗ್ಲ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲೂ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
Follow us on Social media