ನವದೆಹಲಿ: ನವೀಕರಿಸಬಹುದಾದ ಇಂಧನದಿಂದಾಗಿ ಭಾರತ ವರ್ಷಕ್ಕೆ 24,000 ಕೋಟಿ ರೂ.ಗಳನ್ನು ಉಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಭಾರತ ಎನರ್ಜಿ ಫೋರಂ ವೇದಿಕೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂಧನ ಭದ್ರತೆಯೊಂದಿಗೆ ಸ್ವಾವಲಂಬನೆ ಸಾಧಿಸಬಹುದು. ಕೊರೊನಾ ವೈರಸ್ ನಿಂದಾಗಿ ಜಾಗತಿಕ ಇಂಧನ ಬೇಡಿಕೆ ಮೂರನೇ ಒಂದು ಭಾಗದಷ್ಟು ಕುಸಿದಿದೆ, ಆದರೆ, ಭಾರತದಲ್ಲಿ ಇಂಧನ ಬಳಕೆ ದೀರ್ಘಾವಧಿಯಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದರು. ನಮ್ಮ ಇಂಧನ ವಲಯ ವೃದ್ದಿಯತ್ತ ಸಾಗುತ್ತಿದೆ. ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಭಾರತ ಕ್ರಿಯಾತ್ಮಕ ದೇಶವಾಗಿದೆ” ಎಂದು ಪ್ರಧಾನಿ ಹೇಳಿದರು.
ಭಾರತ ಅತ್ಯಂತ ಕಡಿಮೆ ಇಂಗಾಲ ಹೊರಸೂಸುವ ದೇಶ ಎಂದು ಮೋದಿ ಹೇಳಿದರು. ಇಂಧನ ಸಂಪನ್ಮೂಲಗಳ ಸಂರಕ್ಷಣೆಗಾಗಿ ಭಾರತ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ವಿವರಿಸಿದರು. ಕಳೆದ ಆರು ವರ್ಷಗಳಲ್ಲಿ, 1.1 ಕೋಟಿ ಎಲ್ ಇ ಡಿ ಬೀದಿ ದೀಪ ಅಳವಡಿಸಲಾಗಿದ್ದು, ವರ್ಷಕ್ಕೆ 6,000 ಕೋಟಿ ಯುನಿಟ್ ಇಂಧನ ಶಕ್ತಿಯನ್ನು ಉಳಿಸಲಾಗುತ್ತಿದೆ. ಇಂಧನ ಉಳಿತಾಯದಿಂದ ವರ್ಷಕ್ಕೆ 24,000 ಕೋಟಿ ರೂ.ಗಳನ್ನು ಇಂಧನ ವೆಚ್ಚದಲ್ಲಿ ಉಳಿತಾಯವಾಗುತ್ತಿದೆ ಎಂದು ಅವರು ಅಂಕಿ ಅಂಶ ನೀಡಿದರು. ಅನಿಲ ಆಧಾರಿತ ಆರ್ಥಿಕತೆಯಾಗಿ ಬೆಳೆಯಲು ಭಾರತ ಕ್ರಮ ಕೈಗೊಳ್ಳುತ್ತಿದೆ ಎಂದರು.
Follow us on Social media