Breaking News

ಅನುದಾನರಹಿತ ಶಿಕ್ಷಕರಿಗೆ ಟಿಬಿಎಫ್ ಅಜೀವ ಸದಸ್ಯತ್ವ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. 

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಮತ್ತಿತರರ ಸಂಘಟನೆಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಕೊರೋನಾ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದು, ಅವರಿಗೆ ತಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಲಾಗುವುದು. ಆ ಮೂಲಕ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.  

ಶಿಕ್ಷಕರೆಂದರೆ ಎಲ್ಲರೂ ಮಕ್ಕಳ ಹಿತಕ್ಕೆ ದುಡಿಯುತ್ತಾರೆ.ಆದ್ದರಿಂದ ಖಾಸಗಿ ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರನ್ನು ಕೂಡ ಶಿಕ್ಷಕರ ಕಲ್ಯಾಣ ನಿಧಿಗೆ ಸೇರಿಸಸುವ ಮಾನದಂಡಗಳ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಸಚಿವರು ಹೇಳಿದರು.
 
ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸಲಾಗುವುದೆಂದು ಎಂದು ಸುರೇಶ್ ಕುಮಾರ್ ತಿಳಿಸಿದರು. 

1995-2000ವರೆಗಿನ ಶಾಲೆಗಳಿಗೆ ಅನುದಾನ: 
ಶಿಕ್ಷಣ ಕ್ಷೇತ್ರದ ಪ್ರಮುಖ ಬೇಡಿಕೆಯಾದ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸಿಎಂ ಅವರಿಗೆ ಪ್ರಮುಖವಾಗಿ ಇದನ್ನು ಪರಿಗಣಿಸಬೇಕೆಂದು ಕೋರಿದ್ದೆ. ಕೋವಿಡ್ ಸಂಕಷ್ಟದ ಸಮಯವಾದ್ದರಿಂದ ಬಜೆಟ್ ನಲ್ಲಿ ಅದಕ್ಕೆ ಅನುದಾನ ಹಂಚಿಕೆಯಾಗಿಲ್ಲ ಎಂದರು. 

ಆದರೂ, ಈ ಕುರಿತು ಮತ್ತೊಮ್ಮೆ, ಸಿಎಂ ಅವರೊಂದಿಗೆ ಚರ್ಚಿಸಿದ್ದು ಪೂರಕ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಿ ಬಜೆಟ್ ಕುರಿತ ಚರ್ಚೆಯಲ್ಲಿ ಕನಿಷ್ಠ ಐದು ವರ್ಷದ ಅಂದರೆ 1995-2000ವರೆಗಿನ ಶಾಲೆಗಳಿಗೆ ಅನುದಾನ ನೀಡುವ ಘೋಷಣೆ ಮಾಡಬೇಕೆಂದು ಕೋರಿಕೆ ಸಲ್ಲಿಸಲಾಗಿದೆ. ಈ ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟವಾದ ಭರವಸೆ ಪಡೆಯಲಾಗುವುದು ಎಂದರು. 

1995 ರಿಂದ 2000 ವರೆಗಿನ 5 ವರ್ಷಗಳ ಅವಧಿಯಲ್ಲಿ 685 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು 211 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಇದ್ದು, ಅವುಗಳನ್ನು ಅನುದಾನಕ್ಕೊಳಡಪಡಿಸುವ ನಿಟ್ಟಿನಲ್ಲಿ 138.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ ಎಂದು ಸಚಿವರು ತಿಳಿಸಿದರು. 

ಜ್ಯೋತಿ ಸಂಜೀವಿನಿ ವಿಸ್ತರಣೆ: 
ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲಾ ಸಿಬ್ಬಂದಿಗೂ ಆರೋಗ್ಯ ರಕ್ಷಣೆ ಒದಗಿಸುವ ಉದ್ದೇಶದಿಂದ ಜ್ಯೋತಿ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು. 

ಆರ್ ಆರ್ ವಿನಾಯ್ತಿ- ನಿಯಮಗಳ ಸರಳೀಕರಣ: 
ರಾಜ್ಯದಲ್ಲಿನ ಖಾಸಗಿ ಅನುದಾನಿತ/ಅನುದಾನರಹಿತ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವ ಸಂದರ್ಭದಲ್ಲಿ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಆರ್ ಆರ್. ನವೀಕರಣವನ್ನು ಕೋವಿಡ್ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ವಿನಾಯ್ತಿ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಹಾಗೆಯೇ ಸುರಕ್ಷತಾ ಪ್ರಮಾಣಗಳ ಅಗತ್ಯತೆಯ ಸರಳೀಕರಣ ಮಾಡುವ ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸಲು ಎಸ್.ವಿ. ಸಂಕನೂರು ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಮೂರ್ನಾಲ್ಕು ವಾರಗಳೊಳಗೆ ಸಮಿತಿ ವರದಿ ನೀಡಲಿದ್ದು, ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. 

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೆರವು:
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖಾಸಗಿ ಶಾಲೆಗಳಿಗೆ ನೆರವು ನೀಡುವ ಮೂಲಕ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶವಿದ್ದು, ಈ ಕುರಿತು ಮಂಡಳಿಯ ನಿಯಮಗಳಲ್ಲಿ ಅವಕಾಶ ಕಲ್ಪಿಸುವ ಸಂಬಂಧದಲ್ಲಿ ಯೋಜನಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರವೆ ಸಭೆ ನಡೆಸಲಾಗುವುದೆಂದು ಅವರು ಹೇಳಿದರು.

 ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಗೆ ಸಿದ್ಧವಾಗುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನದಂತಹ ಸಮಯದಲ್ಲಿ ಯಾವುದೇ ಮುಷ್ಕರಗಳಿಗೆ ಎಡೆ ಮಾಡಬಾರದೆಂದು ಸಚಿವರು ಮನವಿ ಮಾಡಿದರು. ಶಿಕ್ಷಕ ಸಂಘಟನೆಗಳ ಪ್ರತಿನಿಧಿಯು ಸಚಿವರ ಮನವಿಗೆ ಸ್ಪಂದಿಸಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×