Breaking News

IPL 2022: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ಮಣಿಸಿದ ಆರ್ ಸಿಬಿ!!; ಡೆಲ್ಲಿ ಸೋತರೆ ಪ್ಲೇ ಆಫ್ ಗೆ ಡುಪ್ಲೆಸಿಸ್ ಪಡೆ

ಮುಂಬೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಇಂದಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳಿಂದ ಮಣಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (73) ಹಾಗೂ ಫಫ್ ಡುಪ್ಲೆಸಿ (44)  ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. 

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಈ ಮೊದಲು ನಾಯಕ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕದ (62*) ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ಗೆ, ಜೋಶ್ ಹ್ಯಾಜಲ್‌ವುಡ್ ಮೊದಲ ಆಘಾತ ನೀಡಿದರು. ಶುಭಮನ್ ಗಿಲ್ (1) ಬ್ಯಾಟ್‌ಗೆ ಸವರಿದ ಚೆಂಡನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು.  ಬಳಿಕ ಮ್ಯಾಥ್ಯೂ ವೇಡ್ (16) ಅವರನ್ನು ಮ್ಯಾಕ್ಸ್‌ವೆಲ್ ಔಟ್ ಮಾಡಿದರು. ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಹಾ (31) ರನೌಟ್ ಆದರು. ಇದರಿಂದಾಗಿ 62ಕ್ಕೆ ಮೂರು ವಿಕೆಟ್ ಕಳೆದುಕೊಂಡಿತು.  ಈ ಹಂತದಲ್ಲಿ ಜೊತೆ ಸೇರಿದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಆರ್‌ಸಿಬಿ ಪಾಳಯದಲ್ಲಿ ಆಂತಕ ಸೃಷ್ಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

169 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಆರ್ ಸಿಬಿಗೆ ನಾಯಕ ಫಫ್ ಡುಪ್ಲೆಸಿ ಹಾಗೂ ಮಾಜಿ ಕಪ್ತಾನ ವಿರಾಟ್ ಕೊಹ್ಲಿ ಬಿರುಸಿನ ಆರಂಭವೊದಗಿಸಿದರು. ಫಫ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ವಿರಾಟ್ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.  ಪರಿಣಾಮ 5.3 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ವಿರಾಟ್, 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.  ಕೊಹ್ಲಿ-ಡುಪ್ಲೆಸಿ ಜೋಡಿ ಗುಜರಾತ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅಲ್ಲದೆ ಶತಕದ ಜೊತೆಯಾಟವನ್ನು ಕಟ್ಟಿದರು. 

12ನೇ ಓವರ್‌ನಲ್ಲಿ ತಂಡದ ಮೊತ್ತ 100ರ ಗಡಿ ದಾಟಿತು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ನಾಯಕ ಡುಪ್ಲೆಸಿ ಅವರನ್ನು ರಶೀದ್ ಖಾನ್ ಔಟ್ ಮಾಡಿದರು. ಆಗಲೇ ಕೊಹ್ಲಿ ಜೊತೆಗೆ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 115 ರನ್‌ಗಳ ಜೊತೆಯಾಟ ಕಟ್ಟಿದರು. 38 ಎಸೆತಗಳನ್ನು ಎದುರಿಸಿದ ಡುಪ್ಲೆಸಿ ಐದು ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿದರು.  ಬಳಿಕ ಮ್ಯಾಕ್ಸ್‌ವೆಲ್ ಜೊತೆ ಸೇರಿದ ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಗೆಲುವಿನ ಅಂಚಿನಲ್ಲಿ ಔಟ್ ಆದರು. 54 ಎಸೆತಗಳನ್ನು ಎದುರಿಸಿದ ಕೊಹ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರು.  ಅತ್ತ ಕೇವಲ 18 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇನ್ನೂ ಎಂಟು ಎಸೆತಗಳು ಬಾಕಿ ಉಳಿದಿರುವಂತೆಯೇ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಗುಜರಾತ್ ಪರ ರಶೀದ್ ಎರಡು ವಿಕೆಟ್ ಗಳಿಸಿದರು. 

73 ರನ್ ಗಳಿ ಭರ್ಜರಿಯಾಗಿ ಫಾರ್ಮ್ ಗೆ ಮರಳಿದ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಸೋತರೆ ಪ್ಲೇ ಆಫ್ ಗೆ ಆರ್ ಸಿಬಿ
ಈ ಪಂದ್ಯದ ಗೆಲುವಿನೊಂದಿಗೆ ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿದೆಯಾದರೂ ದೆಲ್ಲಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಫಲಿತಾಂಶ ಕೂಡ ಪರಿಣಾಮ ಬೀರಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲು ಅನುಭವಿಸಿದರೆ ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆಯಿಡಲಿದೆ.  ಆರ್‌ಸಿಬಿ 14 ಪಂದ್ಯಗಳಲ್ಲಿ ಎಂಟನೇ ಗೆಲುವಿನೊಂದಿಗೆ ಒಟ್ಟು 16 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಡೆಲ್ಲಿ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.  ಆರ್‌ಸಿಬಿ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯಿಂದ ನಿರ್ಗಮಿಸಿದೆ. ಇನ್ನೊಂದೆಡೆ ಈ ಸೋಲಿನ ಹೊರತಾಗಿಯೂ ಗುಜರಾತ್, 20 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×