ಕೋಲಾರ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನೈತಿಕ ಹೊಣೆಯನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೇ ಹೊರಬೇಕು. ನೈತಿಕಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು
ಕೋಲಾರದಲ್ಲಿಂದು ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಇಬ್ಬರು ರೋಗಿಗಳ ಸಾವಿನ ಬಗ್ಗೆ ಸರಕಾರವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸಿಲ್ಲ. ನೈತಿಕತೆ ಇದ್ದಿದ್ದರೆ ಆರೋಗ್ಯ ಸಚಿವರು ಬಳ್ಳಾರಿಯ ಆಸ್ಪತ್ರೆಗೆ ಮೊದಲು ಹೋಗಬೇಕಿತ್ತು. ಅವರು ಹೋಗಲಿಲ್ಲ, ಅವರು ಬೆಂಗಳೂರಿನಲ್ಲಿ ಇದ್ದುಕೊಂಡೇ ಮಾತನಾಡುತ್ತಿದ್ದರು. ಇನ್ನು; ನಮಗೆ ಕೆಟ್ಟ ಹೆಸರು ತರಬೇಕು ಎಂದು ಕೆಲವರು ಷಡ್ಯಂತ್ರ ನಡೆಸಿ ಹೀಗೆ ಮಾಡಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳುತ್ತಿದ್ದಾರೆ. ಈಗ ತನಿಖಾ ತಂಡವನ್ನು ಕಳಿಸುತ್ತೇನೆ ಅಂತಿದ್ದಾರೆ ಸಚಿವರು. ಜನತೆಗೆ ಸತ್ಯ ಹೇಳಲು ಎಷ್ಟು ದಿನ ಬೇಕು? ಆರೋಗ್ಯ ಸಚಿವರೇ ಇದರ ನೈತಿಕಹೊಣೆ ಒಪ್ಪಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಆರೋಗ್ಯ ಸಚಿವರು ಪತ್ರಿಕೆಗಳಲ್ಲಿ ಅರ್ಧಪುಟ ಲೇಖನ ಬರೆಸಿಕೊಂಡಿದ್ದಾರೆ. ಇಲ್ಲಿ ನೋಡಿದರೆ ರಾಜ್ಯದ ಆರೋಗ್ಯ ಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಕರ್ಮಕಾಂಡವೇ ಸಾಕ್ಷಿ. ಯಾವ ನಂಬಿಕೆ ಮೇಲೆ ಸರಕಾರದ ಆಸ್ಪತ್ರೆಗೆ ರೋಗಿಗಳು ಬರಬೇಕು? ಘಟನೆ ಸಂಭವಿಸಿ ಇಷ್ಟು ದಿನವಾದರೂ ಸತ್ಯಾಂಶ ಇಲ್ಲಿವರೆಗೂ ಹೊರಬಂದಿಲ್ಲ. ಸರಕಾರದ ಆಡಳಿತದ ವೈಖರಿಯೇ ಇದಕ್ಕೆ ಕಾರಣ. ಆರೋಗ್ಯ ಸಚಿವರು ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.
Follow us on Social media