ಉಳ್ಳಾಲ : ರಾಜ್ಯದ ಏಳು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಿದ್ದು, ಇಲ್ಲಿ ಸಂಪೂರ್ಣ ಹಾನಿಗೀಡಾದ ಮನೆಯವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಅವರು ಕಡಲ್ಕೊರೆತಕ್ಕೀಡಾದ ಉಳ್ಳಾಲ ತಾಲೂಕಿನ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಹಾಗೂ ಮೊಗವೀರಪಟ್ನ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಹಾಗೂ ಮೀನುಗಾರಿಕಾ ಸಚಿವರುಗಳ ಜೊತೆಗೆ ಭೇಟಿ ನೀಡಿ ಪ್ರದೇಶವನ್ನು ಅವಲೋಕಿಸಿ ಬಳಿಕ ಮಾತನಾಡಿದರು.
ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ವಿಪರೀತ ಆಗಿದ್ದು, ತಡೆಗೋಡೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ. ಈ ಕುರಿತು ವಿಪತ್ತು ನಿರ್ವಹಣೆಯ ರಾಜ್ಯ ಉಪಾಧ್ಯಕ್ಷನಾಗಿ ಮುಖ್ಯಮಂತ್ರಿಯ ಗಮನಕ್ಕೆ ಶೀಘ್ರವೇ ತರುತ್ತೇನೆ. ಕಡಲ್ಕೊರೆತ ತಡೆಹಿಡಿಯದಿದ್ದಲ್ಲಿ ಮುಂದುವರಿಯಲಿದೆ. ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ತಜ್ಞರ ತಂಡದ ಜೊತೆಗೆ ಸಮೀಕ್ಷೆ ನಡೆಸಿ ತಡೆಹಿಡಿಯುವುದರ ಪ್ರಯತ್ನ ಪಡುತ್ತೇವೆ. ಏಳು ಜಿಲ್ಲೆಗಳಲ್ಲಿ ಬಹಳ ಮಳೆಯಾಗಿದೆ. ಏಳು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚನೆಯನ್ನು ನೀಡಲಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಕ್ಷಣ ರೂ. 5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ನಾಳೆ ಬೆಂಗಳೂರಿಗೆ ತೆರಳಿದ ತಕ್ಷಣ ಆದೇಶಕ್ಕೆ ಸಹಿ ಹಾಕುತ್ತೇನೆ. ಹಿಂದೆ ಎನ್ ಡಿಆರ್ ಎಫ್ ಕಾನೂನಿನಡಿ 95,000 ರೂ. ಮಾತ್ರ ನೀಡುವ ಕಾನೂನಿತ್ತು. ಸದ್ಯ ಮುಖ್ಯಮಂತ್ರಿಗಳ ಜತೆಗೆ ಮಾತನಾಡಿ ಅದನ್ನು ರೂ. 5 ಲಕ್ಷ ಕ್ಕೆ ಏರಿಕೆಯನ್ನು ಮಾಡಲಾಗಿದೆ. ಮನೆಗಳಿಗೆ ನೀರು ನುಗ್ಗಿದಾಗ ಇದ್ದಂತಹ ರೂ.3500 ರೂಗಳನ್ನು ರೂ.10,000ಕ್ಕೆ ಏರಿಕೆ ಮಾಡಲಾಗಿದೆ.
ರಾಜ್ಯ ಸರಕಾರ ಬಿದ್ದಂತಹ ಮನೆಗಳಿಗೆ, ಹಸುಕರುಗಳ ಸಾವು, ಬೆಳೆಹಾನಿ ತಕ್ಷಣ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಸಾರ್ವಜನಿಕರು ಆತಂಕ ಪಡದೇ ಸರಕಾರ ತಮ್ಮ ಜತೆಗಿದೆ ಅನ್ನುವ ಧೈರ್ಯವಿರಲಿ ಎಂದ ಅವರು 60 ವರ್ಷದಿಂದ ಕಾಂಗ್ರೆಸ್ ಸರಕಾರವೇ ಇತ್ತು. ಕಳೆದ 10 ವರ್ಷಗಳಿಂದಷ್ಟೇ ಬಿಜೆಪಿ ಪಕ್ಷ ಆಡಳಿತದಲ್ಲಿದೆ, ಹಿಂದೆಯೂ ಸಮುದ್ರವೂ ಇತ್ತು, ಕೊರೆತವೂ ಇತ್ತು. ಅದನ್ನು ಅಷ್ಟೂ ವರ್ಷಗಳಲ್ಲಿ ಸರಿಪಡಿಸಲು ಸಾಧ್ಯವಾಗದವರು ಟೀಕೆ ಮಾಡುವುದು ಸರಿಯಲ್ಲ.
ರಾಜ್ಯ ಸರಕಾರ ತಮ್ಮ ಪಕ್ಷದ ಶಾಸಕರು ಆಡಳಿತವಲ್ಲದ ಪ್ರದೇಶಕ್ಕೂ ಭೇಟಿ ನೀಡಿ ಹಾನಿಗೊಳಗಾದಂತಹ ಮನೆಮಂದಿಗೆ ಸಹಾಯವನ್ನು ಮಾಡುತ್ತಿದೆ, ಇರುವಂತಹ ಎನ್ ಡಿಆರ್ ಎಫ್ ಅನುದಾನದಲ್ಲಿ ಒದಗಿಸುತ್ತಿದೆ. ಕರುನಾಡಿನ ಜನತೆ ಸಂಕಷ್ಟದಲ್ಲಿ ಸದಾ ರಾಜ್ಯ ಸರಕಾರ ಮುಂದಿದೆ ಎಂದರು.
Follow us on Social media