ಬೆಂಗಳೂರು : ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ. ಖಾದರ್ ಅವರ ಜೀವಕ್ಕೆ ಅಪಾಯವಿರುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಈ ಬಗ್ಗೆ ತಿಳಿಸಿದ ಯು.ಟಿ.ಖಾದರ್, ಮೂರ್ನಾಲ್ಕು ತಿಂಗಳ ಹಿಂದೆ ಗೃಹ ಸಚಿವರು ತಮಗೆ ಮೊಬೈಲ್ ಕರೆ ಮಾಡಿ, ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ನಿಮ್ಮ ಜೀವಕ್ಕೆ ಅಪಾಯವಿದೆ ಎಂಬ ಮಾಹಿತಿ ನೀಡಿದ್ದರು. ಅದಕ್ಕಾಗಿ ತಾವು ಗೃಹ ಸಚಿವರಿಗೆ ಧನ್ಯವಾದ ತಿಳಿಸಿದ್ದೇನೆ. ನಾನು ಜನಪ್ರತಿನಿಧಿ. ಆದರೆ ಜನಸಾಮಾನ್ಯರಿಗೆ ಈ ರೀತಿ ಆದರೆ ಯಾರು ಜವಾಬ್ದಾರಿ. ಭದ್ರತೆ ಕೇವಲ ಹೆಸರಿಗೆ ಮಾತ್ರ ಆಗಬಾರದು. ಕೂಲಿಕಾರ್ಮಿಕನ ಜೀವಕ್ಕೂ ಬೆಲೆ ಇದೆ. ನಿರ್ಬಯವಾಗಿ ಎಲ್ಲರೂ ಜೀವಿಸುಂತಾಗಬೇಕು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೇವಲ ಒಬ್ಬನನ್ನು ಬಂಧಿಸಲಾಗಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ. ಯಾರು ಹಣ ನೀಡಿದ್ದರು ಎಂಬುದನ್ನು ಮೊದಲು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು. ಜನಸಾಮಾನ್ಯರಿಗೂ ಪೊಲೀಸ್ ಇಲಾಖೆ ಭದ್ರತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಗುಪ್ತಚರ ಇಲಾಖೆ ಈ ವಿಚಾರ ತಿಳಿಸಿದ ಬೆನ್ನಲ್ಲೇ ಎಚ್ಚರಗೊಂಡ ಸರ್ಕಾರ ಖಾದರ್ ಅವರಿಗೆ ಭದ್ರತೆ ಹೆಚ್ಚು ಮಾಡಲು ಸೂಚಿಸಿದೆ. ಆದರೆ ಖಾದರ್ ನನಗೆ ಯಾವುದೇ ಜೀವಭಯ ಇಲ್ಲ ಎಂದು ಹೇಳಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಭದ್ರತೆ ನಿರಾಕರಿಸಿದ ವಿಚಾರ ತಿಳಿದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಿದ್ದರಾಮಯ್ಯ ಮೂಲಕ ಖಾದರ್ ಅವರ ಮನ ಒಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಓರ್ವ ಪೋಲಿಸ್ ಸಿಬ್ಬಂದಿಯನ್ನು ಭದ್ರತೆ ನೀಡಲು ಸರ್ಕಾರ ಮುಂದಾಗಿದೆ. ಇಂತಹ ಕಾಟಾಚಾರದ ಭದ್ರತೆ ನನಗೆ ಬೇಡ ಎಂದು ನಾನು ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ
Source : UNI
Follow us on Social media