ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.
ಸಾಫ್ಟ್ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.
ಶರ್ಮಿಳಾರವರು ಸುಮಾರು 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆ ಸುಮಾರು ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಬೆಂಗಳೂರಿನಲ್ಲಿ ಆಕೆ ಇದ್ದ ಪಿಜಿಯಿಂದ ಯಾರಿಗೂ ಹೇಳದೆ ಕುಣಿಗಲ್ಗೆ ಹೋಗಿದ್ದರು.
ಈ ವಿಚಾರ ಅವರ ಸೋದರ ವಿಕೇಶ್ ಶೆಟ್ಟಿಗೆ ಆಕೆಯ ಸ್ನೇಹಿತರು ತಿಳಿಸಿದಾಗ ವಿಕೇಶ್ ಕರೆ ಮಾಡಿ ಬೆಂಗಳೂರಿಗೆ ಹೋಗುವಂತೆ ತಿಳಿಸಿದ್ದರು.
ಆದರೆ ಜೂ.28ರಂದು ಶರ್ಮಿಳಾಳು ವಿಕೇಶ್ ಶೆಟ್ಟಿಗೆ ಕರೆಮಾಡಿ ತಾನು ಒಂದು ತಿಂಗಳ ಅವಧಿಗೆ ಮನೆಗೆ ಬಂದು ಹೋಗುವಂತೆ ತಿಳಿಸಿದ್ದು ಅದರಂತೆ ನಿನ್ನೆ ಬೆಳಿಗ್ಗೆ ಮನೆಗೆ ಬಂದಿದ್ದರು.
ತನ್ನ ಲಗೇಜನ್ನು ಮನೆಯ ಒಳಗೆ ಇಟ್ಟು ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ತುಂಬಾ ಹೊತ್ತಾದರೂ ವಾಪಾಸು ಬಾರದೇ ಇದ್ದ ಕಾರಣ ವಿಕೇಶ್ ಶೆಟ್ಟಿ ನೆರೆಕರೆಯ ನಿವಾಸಿಗಳೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರು.
ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಪಕ್ಕದ ಬಾವಿಯಲ್ಲಿ ಬಿದ್ದಿರಬಹುದು ಎಂದು ಅನುಮಾನಗೊಂಡು ಸುರೇಶ ಎಂಬವರ ಮುಖಾಂತರ ಪಾತಾಳ ಗರುಡವನ್ನು ಬಾವಿಗೆ ಹಾಕಿ ಹುಡುಕಿದಾಗ ಶರ್ಮಿಳಾ ದೇಹವು ಮೇಲೆ ಬಂದಿದ್ದು ಆಕೆಯು ಮೃತಪಟ್ಟಿರುವುದಾಗಿ ಕಂಡು ಬಂದಿದೆ.
ಶರ್ಮಿಳಾಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media