ಉಳ್ಳಾಲ : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಳೆದ ಏಳು ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
- ಕೊಲ್ಯ ಸಾರಸ್ವತ ಕಾಲನಿ ನಿವಾಸಿ ಪಲ್ಲವಿ (25) ಮೃತಪಟ್ಟವರು. ಕಳೆದ ವರ್ಷ ಡಿಸೆಂಬರ್ 2ರಂದು ಮಂಗಳೂರಿನಿಂದ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಕೊಲ್ಯದ ಬಳಿ ರಾ.ಹೆ. 66ರಲ್ಲಿ ರಸ್ತೆ ದಾಟುವ ವೇಳೆ ಪಲ್ಲವಿಯವರ ಮೊಬೈಲ್ ರಸ್ತೆಗೆ ಬಿದ್ದಿತ್ತು. ಈ ವೇಳೆ ಅವರು ರಸ್ತೆಯಲ್ಲಿ ಕೆಳಕ್ಕೆ ಬಗ್ಗಿ ಮೊಬೈಲ್ನ್ನು ಹೆಕ್ಕುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಕುಂಪಲ ನಿವಾಸಿ ವಿಜೇಶ್ (31) ಸ್ಥಳದಲ್ಲೇ ಮೃತಪಟ್ಟಿದ್ದರು.ನೆಲಕ್ಕೆ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದ ಪಲ್ಲವಿ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಕಳೆದ ಏಳು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ತಂದೆ, ತಾಯಿ, ಸಹೋದರ, ಸಹೋದರಿಯನ್ನು ಪಲ್ಲವಿ ಅಗಲಿದ್ದಾರೆ.