ಮಂಗಳೂರು : 7ನೇ ತರಗತಿಯ ಪಠ್ಯದಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರನ್ನು ಕೈಬಿಟ್ಟಿರುವುದು ಬಂಟ ಸಮುದಾಯಕ್ಕೆ ಮಾಡಿದ ಅನ್ಯಾಯ. ಬಿಜೆಪಿ ತುಳುನಾಡಿನ ಭಾವನೆ ಜೊತೆ ಆಟವಾಡಿ ಅಕ್ಷಮ್ಯ ಅಪರಾಧ ಮಾಡಿದೆ. ಇದಕ್ಕೆ ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರ ನಿರಾಕರಿಸಿ ಬ್ರಹರ್ಷಿ ನಾರಾಯಣಗುರುಗಳಿಗೆ ಅವಮಾನ ಮಾಡಿದರು.
ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆಗೆ ತುಳುನಾಡಿನ ವಿಜಯ ಬ್ಯಾಂಕ್ ಅನ್ನು ವಿಲೀನ ಮಾಡಿ ತುಳುನಾಡಿಗೆ ಅನ್ಯಾಯ ಮಾಡಿದರು.
ಪಠ್ಯಪುಸ್ತಕದಲ್ಲಿ ಬ್ರಹ್ಮರ್ಷಿ ನಾರಾಯಣ ಗುರುವಿಗೆ ಅವಮಾನ ಮಾಡಿ ಇದೀಗ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕಯ್ಯಾರ ಕಿಂಞಣ್ಣ ರೈ ಹೆಸರನ್ನು ತೆಗೆದು ಮಂಜೇಶ್ವರ ಗೋವಿಂದ ಪೈ ಹೆಸರನ್ನು ಸೇರಿಸಿ ಇತಿಹಾಸವನ್ನು ಮರೆಮಾಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.
ಮಂಜೇಶ್ವರ ಗೋವಿಂದ ಪೈಯನ್ನು ಗುರುವಿನ ಸ್ಥಾನದಲ್ಲಿ ನೋಡಿದವರು ಕಯ್ಯಾರ ಕಿಂಞಣ್ಣ ರೈ. 1956ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭಗೊಳ್ಳುತ್ತದೆ.
ಚಳುವಳಿ ಆರಂಭವಾದಾಗ ಗೋವಿಂದ ಪೈ ಅನಾರೋಗ್ಯಕ್ಕೀಡಾಗುತ್ತಾರೆ ಆಗ ಚಳುವಳಿಗೆ ಭಾಷಣ ಮಾಡಲು ಕಯ್ಯಾರ ಅವರನ್ನು ಗೋವಿಂದ ಪೈ ಅವರೇ ಕಳುಹಿಸುತ್ತಿದ್ದರು.
ಕಯ್ಯಾರ ಅವರು ತನ್ನ 100ನೇ ವರ್ಷದ ಹುಟ್ಟುಹಬ್ಬದ ಕೊನೆಯ ಭಾಷಣದಲ್ಲಿ ‘ನನ್ನ ಒಂದು ಕೈ ಪೆರಡಾಲ (ಬದಿಯಡ್ಕ) ದಲ್ಲಿದೆ ಮತ್ತೊಂದು ಕೈ ಕರ್ನಾಟಕದಲ್ಲಿದೆ. ದಯವಿಟ್ಟು ಕರ್ನಾಟಕದವರು ನನ್ನನ್ನು ಎತ್ತಿಬಿಡಿ ಎಂದು ಹೇಳುತ್ತಾರೆ.
1956 ರಿಂದ 2015ರ ಆ.9 ರವರೆಗೆ ಕರ್ನಾಟಕ ಏಕೀಕರಗೋಸ್ಕರ ಕಿಂಞಣ್ಣ ರೈ ಹೋರಾಟ ಮಾಡಿದ್ದನ್ನು ನಾವು ಕಂಡಿದ್ದೇವೆ.
ಇದೀಗ ಪಠ್ಯಪುಸ್ತಕದಿಂದ ಅವರ ಹೆಸರು ತೆಗೆದಿರುವ ಮೂಲಕ ತುಳುನಾಡಿನ ಭಾವನೆ ಜೊತೆ ಬೆಜೆಪಿ ಆಟವಾಡುತ್ತಿದೆ. ರೋಹಿತ್ ಚಕ್ರತೀರ್ಥ ಒಬ್ಬ ಇತಿಹಾಸ ತಿಳಿಯದ ಅಯೋಗ್ಯ.
ಆದ್ದರಿಂದ ಈ ಬಗ್ಗೆ ಬಿಜೆಪಿ ಕ್ಷಮೆ ಕೇಳಬೇಕು. ಜೊತೆಗೆ ಬ್ರಹ್ಮರ್ಷಿ ನಾರಾಯಣ ಗುರು, ಕಯ್ಯಾರ ಕಿಂಞಣ್ಣ ಪಠ್ಯ ಸೇರ್ಪಡೆ ಮಾಡಬೇಕು. ಇಂದು ರೋಹಿತ್ ಚಕ್ರತೀರ್ಥರನ್ನು ಮಂಗಳೂರಿನಲ್ಲಿ ಸನ್ಮಾನಕ್ಕೆ ಕರೆಯಬೇಕಿತ್ತು. ಆಗ ಪ್ರಜ್ಞಾವಂತ ನಾಗರಿಕರು ಸರಿಯಾದ ಸನ್ಮಾನ ಮಾಡಿ ಕಳುಹಿಸುತ್ತಿದ್ದರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಇದ್ದರು.