ಸಿಡ್ನಿ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಟಾಸ್ ಸಹ ಕಾಣದೆ ರದ್ದಾದ ಪರಿಣಾಮ, ಭಾರತ ಮಹಿಳಾ ತಂಡ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿ ಫೈನಲ್ ಗೆ ಅರ್ಹತೆ ಗಳಿಸಿದೆ.
ಗುರುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯ ವರುಣನ ಅವಕೃಪೆಗೆ ಬಲಿಯಾದ ಹಿನ್ನೆಲೆಯಲ್ಲಿ ಎ ಗುಂಪಿನಲ್ಲಿ ಅಜೇಯದೊಂದಿಗೆ 8 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದ್ದ ಹರ್ಮನ್ ಪ್ರೀತ್ ಕೌರ್ ಬಳಗ ಪ್ರಶಸ್ತಿಗೆ ಸುತ್ತಿಗೆ ಮುನ್ನಡೆದಿದೆ.
ಇಂಗ್ಲೆಂಡ್ ದ್ವಿತೀಯ ಸ್ಥಾನ ಗಳಿಸಿದ್ದ ಕಾರಣ ಪ್ರಶಸ್ತಿ ಸುತ್ತಿಗೆ ಮುನ್ನಡೆಯುವಲ್ಲಿ ವಿಫಲಗೊಂಡಿದೆ.ಗುರುವಾರ ಬೆಳಗ್ಗೆಯಿಂದಲೂ ಧಾರಾಕಾರ ಮಳೆ ಸುರಿದ ಪರಿಣಾಮ ಅಂಪೈರ್ ಮತ್ತು ಮ್ಯಾಚ್ ರೆಫರಿ ಭಾರತೀಯ ಕಾಲಮಾನ ಬೆಳಗ್ಗೆ 10.44ಕ್ಕೆ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.ಐಸಿಸಿ ಇತಿಹಾಸದಲ್ಲೇ ಇದೇ ಮೊದಲ ಸಲ ಫೈನಲ್ ಪ್ರವೇಶಿಸಿರುವ ಭಾರತ, ಮಾರ್ಚ್ 8ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ತಂಡಗಳಲ್ಲಿ ಒಬ್ಬರನ್ನು ಎದುರಿಸಲಿದೆ.
