ನವದೆಹಲಿ : ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆ ನಡೆಸುತ್ತಿರುವುದರ ವಿರುದ್ದ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನನ್ನ ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದೆಯೊಬ್ಬರು ಆರೋಪ ಮಾಡಿದ್ದಾರೆ. ಅವರ ಈ ಆರೋಪದ ವೀಡಿಯೋ ತುಣುಕನ್ನು ಮಾಜಿ ಸಚಿವ ಶಶಿ ತರೂರ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೂರು ದಿನಗಳಿಂದ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ವಿಚಾರಣೆ ವಿರೋಧಿಸಿ ಇಡಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಿರತವಾಗಿದ್ದು, ಬುಧವಾರದ ಪ್ರತಿಭಟನೆ ಸಂದರ್ಭ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ನಡುವೆ ತಮಿಳುನಾಡಿನ ಕರೂರ್ ಕ್ಷೇತ್ರದ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಅವರು, ಪೊಲೀಸರು ನನ್ನ ಬಟ್ಟೆ ಹರಿದು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಇತರರಂತೆ ನನ್ನನ್ನೂ ಅಪರಾಧಿಯನ್ನಾಗಿ ಬಸ್‌ನೊಳಗೆ ತಳ್ಳಿ ಹಾಕಿದರು ಎಂದೂ ಆಪಾದನೆ ಹೊರಿಸಿದ್ದಾರೆ. ಬಟ್ಟೆ ಹರಿದಿರುವುದನ್ನೂ ವೀಡಿಯೋದಲ್ಲಿ ತೋರಿಸಿದ್ದಾರೆ.ಸುಮಾರು ಏಳೆಂಟು ಮಂದಿ ಮಹಿಳೆಯರನ್ನು ಬಸ್‌ನಲ್ಲಿ ಕೂಡಿ ಹಾಕಲಾಗಿತ್ತು. ನೀರು ಕೇಳಿದರೂ ನೀಡಲಿಲ್ಲ. ಮಾರಾಟಗಾರರಿಗೂ ನಾವು ನೀರು ಖರೀದಿಸುವಾಗ ಕೊಡಬೇಡಿ ಎನ್ನುತ್ತಿದ್ದರು.
ಸ್ಪೀಕರ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದಿರುವುದು ವೀಡಿಯೋದಲ್ಲಿದೆ.ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಶಶಿ ತರೂರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಕೆಟ್ಟ ಸಂಗತಿ. ಮಹಿಳಾ ಪ್ರತಿಭಟನಾಕಾರರನ್ನು, ಅದರಲ್ಲೂ ಸಂಸದೆಯೋರ್ವರನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ತಪ್ಪು ಸ್ಪೀಕರ್ ಓಂ ಬಿರ್ಲಾ ಅವರು ಇದರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ
Follow us on Social media