ಉಳ್ಳಾಲ: ತಾಯಿ ಹುಟ್ಟುಹಬ್ಬದ ದಿನದಂದು ಶುಭಾಷಯ ತಿಳಿಸಲು ಹಾಸ್ಟೆಲ್ ಮೇಲ್ವಿಚಾರಕರು ಮೊಬೈಲ್ ನೀಡದ ಕಾರಣ ಮನನೊಂದ ಶಾಲಾ ಬಾಲಕ ಡೆತ್ ನೋಟ್ ಬರೆದಿಟ್ಟು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಖಾಸಗಿ ಶಾಲಾ ವಿದ್ಯಾರ್ಥಿ ನಿಲಯದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಬೆಂಗಳೂರು ಹೊಸಕೋಟೆ ಮೂಲದ ಪೂರ್ವಜ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ನಿನ್ನೆ ತಾಯಿ ಹುಟ್ಟುಹಬ್ಬದ ಕಾರಣಕ್ಕೆ ಈತ ಶುಭಾಶಯ ತಿಳಿಸಲು ಹಾಗೂ ಮನೆಮಂದಿ ಜೊತೆಗೆ ಮಾತನಾಡಲು ಮೊಬೈಲ್ ಕೇಳಿದಾಗ ಹಾಸ್ಟೆಲ್ ವಾರ್ಡನ್ ತಿರಸ್ಕರಿಸಿದ್ದರು. ಮನೆಮಂದಿಯೂ ಪೂರ್ವಜ್ ನನ್ನು ಸಂಪರ್ಕಿಸಲು 15 ಬಾರಿ ಯತ್ನಿಸಿದರೂ ಮಾತನಾಡಲು ಬಿಟ್ಟಿರಲಿಲ್ಲ.
ಇದರಿಂದ ಬೇಸರ ಪಟ್ಟುಕೊಂಡು ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಪೂರ್ವಜ್ ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಆತ ಬರೆದ ಡೆತ್‌ನೋಟ್‌ನಲ್ಲಿ ‘ತಾಯಿಗೆ ಹುಟ್ಟುಹಬ್ಬದ ಶುಭಾಷಯಗಳು.
ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ಸು ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದು:ಖಕ್ಕೆ ತಳ್ಳಿದಿರಿ. ಯಾರೂ ಕೂಗಬೇಡಿ, ಎಂದು ಆಂಗ್ಲಭಾಷೆಯಲ್ಲಿ ಬರೆದಿಡಲಾಗಿದೆ.
ಇನ್ನು ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದ ಹಿನ್ನೆಲೆ ಹಾಸ್ಟೆಲ್ ಮೇಲ್ವಿಚಾರಕರು ಮನೆಯವರ ಗಮನಕ್ಕೆ ತಂದಿದ್ದು ಇನ್ನಷ್ಟೇ ಮೃತದೇಹವನ್ನು ಶವಮಹಜರಿಗೆ ಕಳುಹಿಸಬೇಕಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಗನ ಸಾವಿಗೆ ಹಾಸ್ಟೆಲ್ ಸಿಬ್ಬಂದಿಯೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.
Follow us on Social media