ಮಂಗಳೂರು: ಮಂಗಳೂರಿನಲ್ಲಿ ನಕಲಿ ವೈದ್ಯಕೀಯ ಪ್ರಮಾಣಪತ್ರ ವಿತರಿಸುತ್ತಿದ್ದ ಜಾಲ ಪತ್ತೆಯಾಗಿದ್ದು, ಶುಕ್ರವಾರ ಮಧ್ಯಾಹ್ನ ಮಂಗಳೂರು ಸೆಂಟ್ರಲ್ ಸ್ಟೇಷನ್ ಬಳಿಯ ರೈಲ್ವೆ ಆರೋಗ್ಯ ಕೇಂದ್ರದ ಮೇಲೆ ದಾಳಿ ನಡೆಸಿ ಸಿಬಿಐ, ದಂಧೆಯಲ್ಲಿ ಭಾಗಿಯಾದ ಆರೋಪದ ಮೇಲೆ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ಮೂವರನ್ನು ಬಂಧಿಸಿದೆ.
ಕಳೆದ ಒಂದು ವರ್ಷದಿಂದ ಈ ದಂಧೆ ನಡೆಯುತ್ತಿದ್ದು, ಇಲ್ಲಿನ ವೈದ್ಯರು ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಮತ್ತು ಕೊಂಕಣ ರೈಲ್ವೆಯ ವ್ಯಕ್ತಿಗಳಿಗೆ ನಕಲಿ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದುವರೆಗೆ 1,500ಕ್ಕೂ ಹೆಚ್ಚು ಬೋಗಸ್ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡಲಾಗಿದೆ.
ಮೂಲಗಳ ಪ್ರಕಾರ, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಶಿವಶಂಕರ ಮೂರ್ತಿ, ಫಾರ್ಮಸಿಸ್ಟ್ ವಿಜಯನ್ ವಿ ಎ ಮತ್ತು ಬ್ರೋಕರ್ ಇಬ್ರಾಹಿಂ ಎಂಬ ಮೂವರನ್ನು ಸಿಬಿಐ ಬಂಧಿಸಿದೆ. ಸಿಬಿಐ ತಂಡ ಆರೋಗ್ಯಕೇಂದ್ರದೊಳಗೆ ಇನ್ನೂ ಶೋಧ ನಡೆಸುತ್ತಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ಒಟ್ಟು 1500 ಪುಟಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನೂರಾರು ಪರವಾನಗಿ ಪಡೆದ ಮಾರಾಟಗಾರರು, ಹಮಾಲರು, ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ರೈಲುಗಳಲ್ಲಿ ಅಡುಗೆ ಮಾಡುವವರು ರೈಲ್ವೆಗೆ ವಾರ್ಷಿಕವಾಗಿ ಫಿಟ್‌ನೆಸ್ ವೈದ್ಯಕೀಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
”ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿರುವವರಿಗೆ ದಲ್ಲಾಳಿಗಳ ಸಹಾಯದಿಂದ ಆರೋಗ್ಯ ಘಟಕದಲ್ಲಿರುವವರಿಗೆ ವಾಟ್ಸ್‌ಆ್ಯಪ್ ಮೂಲಕ ಆಧಾರ್ ಕಾರ್ಡ್ ಕಳುಹಿಸಿದರೆ ಅವರಿಗೆ ತಕ್ಷಣ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಇದಕ್ಕೆ 525 ರೂಪಾಯಿ ಅನ್ನು ಆನ್‌ಲೈನ್ ಮೂಲಕ ಪಾವತಿ ಮಾಡಿರುವುದು ಪತ್ತೆಯಾಗಿದೆ” ಎಂದು ಮೂಲಗಳು ತಿಳಿಸಿವೆ.
Follow us on Social media