ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಸುದ್ದಿಗೋಷ್ಠಿಯನ್ನು ಕರೆದಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರು ಹಾಗೂ ಬಿಜೆಪಿ ಪಾಳಯದಲ್ಲಿ ಕಳವಳ ಶುರುವಾಗಿದೆ.
ಇಂದು ಬೆಳಿಗ್ಗೆ 11.30ರ ಸುಮಾರಿಗೆ ಸುದ್ಧಿಗೋಷ್ಠಿ ನಡೆಯಲಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತೀವ್ರವಾಗಿ ಕಿಡಿಕಾರಿ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ಈಶ್ವರಪ್ಪ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮತ್ತೇನು ಮುಜುಗರವನ್ನುಂಟು ಮಾಡುತ್ತಾರೋ ಎಂಬ ತಳಮಳ ರಾಜ್ಯ ಬಿಜೆಪಿ ನಾಯಕರಲ್ಲಿ ಶುರುವಾಗಿದೆ.
ಈಶ್ವರಪ್ಪ ಅವರು ಸಿಎಂ ಯಡಿಯೂರಪ್ಪ ವಿರುದ್ಧ ಹಾಗೂ ಪಕ್ಷಕ್ಕೆ ಮುಜುಗರವನ್ನು ತರಗುವ ವರ್ತನೆಯನ್ನು ಇದೇ ರೀತಿ ಮುಂದುವರೆಸಿದ್ದೇ ಆದರೆ, ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ರಾಜಕೀಯ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ಅವರು, ನಾಳೆಯವರೆಗೂ ಕಾದು ನೋಡಿ ಎಂದಿದ್ದಾರೆ.
ಈಶ್ವರಪ್ಪ ಈ ಬಾರಿ ಯಡಿಯೂರಪ್ಪ ವಿರುದ್ಧ ಯಾವುದೇ ರೀತಿಯ ಮಾತುಗಳನ್ನೂ ಆಡುವುದಿಲ್ಲ. ಸುದ್ದಿಗೋಷ್ಠಿಯು ಈಶ್ವರಪ್ಪ ಅವರ ಸಚಿವಾಲಯದ ಸಾಧನೆಯ ಕುರಿತಾಗಿ ಆಗಿದೆ. ಇದೇ ವೇಳೆ ಸಚಿವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆಂದು ವಿಧಾನಸೌಧದ ಮೂಲಗಳು ಮಾಹಿತಿ ನೀಡಿವೆ.
Follow us on Social media