ಪುಣೆ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಆರು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ್ದ 337 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಜಾನಿ ಬೇರ್ ಸ್ಟೋ (124 ರನ್) ಅವರ ಅಮೋಗ ಶತಕ, ಬೆನ್ ಸ್ಟೋಕ್ಸ್ (99 ರನ್) ಮತ್ತು ಜೇಸನ್ ರಾಯ್ (55ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ ಕೇವಲ 43.3 ಓವರ್ ಗಳಲ್ಲಿಯೇ 337 ರನ್ ಗಳಿಸಿ 6 ವಿಕೆಟ್ ಗಳ ಅಂತರದಿಂದ ಗೆದ್ದು ಬೀಗಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 1-1 ರ ಅಂತರದಲ್ಲಿ ಸಮಬಲ ಸಾಧಿಸಿದೆ.
ಬೃಹತ್ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಚೋ ಮೊದಲ ವಿಕೆಟ್ ಗೆ 110 ರನ್ ಗಳ ಶತಕದ ಜೊತೆಯಾಟವಾಡಿದರು. ಈ ವೇಳೆ ರೋಹಿತ್ ಶರ್ಮಾ ಅವರ ಅದ್ಭುತ ಫೀಲ್ಡಿಂಗ್ ಚಮತ್ಕಾರದಿಂದಾಗಿ 55 ರನ್ ಗಳಿಸಿದ್ದ ಜೇಸನ್ ರಾಯ್ ರನೌಟ್ ಆದರು. ಬಳಿಕ ಜಾನಿ ಬೇರ್ ಸ್ಚೋ ಜೊತೆ ಗೂಡಿದ ಬೆನ್ ಸ್ಟೋಕ್ಸ್ ನಿಧನಾವಾಗಿ ಬ್ಯಾಟಿಂಗ್ ಲಯ ಕಂಡಕೊಂಡರು. ಬಳಿಕ ಭರ್ಜರಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಗರೆದ ಬೆನ್ ಸ್ಟೋಕ್ಸ್ ಕೇವಲ 52 ಎಸೆತಗಳಲ್ಲಿ ಬರೊಬ್ಬರಿ 10 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 99ರನ್ ಗಳಿಸಿದರು.
ಈ ವೇಳೆ ದಾಳಿಗಿಳಿದ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಔಟಾಗುವ ಮೂಲಕ ಬೆನ್ ಸ್ಟೋಕ್ಸ್ ಕೇವಲ 1 ರನ್ ಅಂತರದಲ್ಲಿ ಶತಕ ವಂಚಿತರಾದರು. ಅಂತೆಯೇ ಈ ಪಂದ್ಯದ ಮೂಲಕ ಸ್ಟೋಕ್ಸ್ ಫಾರ್ಮ್ ಗೆ ಮರಳಿಸಿದರು. ಬೆನ್ ಸ್ಟೋಕ್ಸ್ ಔಟಾಗುತ್ತಿದ್ದಂತೆಯೇ 124ರನ್ ಗಳಿಸಿದ್ದ ಜಾನಿ ಬೇರ್ ಸ್ಟೋ ಕೂಡ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಜಾಸ್ ಬಟ್ಲರ್ ಶೂನ್ಯಕ್ಕೆ ಔಟಾಗುವುದರೊಂದಿಗೆ ಇಂಗ್ಲೆಂಡ್ ಮತ್ತೆ ಆಘಾತ ಎದುರಿಸಿತ್ತು. ಆದರೆ ಅದಾಗಲೇ ಇಂಗ್ಲೆಂಡ್ ತಂಡ ಗೆಲುವಿಗೆ ಸನಿಹವಾಗಿದ್ದರಿಂದ ಕ್ರೀಸ್ ಗೆ ಬಂದಿದ್ದ ಡೇವಿಡ್ ಮಲನ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಜೋಡಿ ನಿರಾಯಾಸವಾಗಿ ಗೆಲುವಿನ ಔಪಚಾರಿಕತೆ ಮುಕ್ತಾಯ ಮಾಡಿತು.
ಅಂತಿಮವಾಗಿ ಇಂಗ್ಲೆಂಡ್ ತಂಡ 43.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿ 6 ವಿಕೆಟ್ ಅಂತರದ ಗೆಲುವಿನ ನಗೆ ಬೀರಿತು.
Follow us on Social media