ಚೆನ್ನೈ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸಿದೆ.
ನಾಯಕ ಜೋ ರೂಟ್ (218 ರನ್), ಬೆನ್ ಸ್ಟೋಕ್ಸ್ (82 ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಪೇರಿಸಿದೆ. 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಇಂಗ್ಲೆಂಡ್ ತಂಡದ ಕೆಳ ಕ್ರಮಾಂಕದ ಡೊಮಿನಿಕ್ ಬೆಸ್ (28 ರನ್)ಮತ್ತು ಜಾಕ್ ಲೀಚ್ (6 ರನ್) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ದಿನ ಜೊರೂಟ್ ತಮ್ಮ ಅಮೋಘ ದ್ವಿಶತಕದ ಮೂಲಕ 2ನೇ ದಿನದ ಗೌರವಕ್ಕೆ ಪಾತ್ರರಾದರು. ಅವರಿಗೆ ಬೆನ್ ಸ್ಟೋಕ್ಸ್ ಉತ್ತಮ ಸಾಥ್ ನೀಡಿದರು. ಉಳಿದಂತೆ ಒಲ್ಲಿ ಪೋಪ್ (34 ರನ್), ಜೋಸ್ ಬಟ್ಲರ್ (30 ರನ್) ಭಾರತೀಯ ಬೌಲರ್ ಗಳಿಗೆ ಪ್ರತಿರೋಧ ಒಡ್ಡಿದರು. ಆ ಮೂಲಕ ಇಂಗ್ಲೆಂಡ್ ತಂಡ 550 ರನ್ ಗಡಿ ದಾಟಿತು.
4 ವಿಕೆಟ್ ಪಡೆದು ಟೀಂ ಇಂಡಿಯಾ ಮಿಂಚಿದ ಬೌಲರ್ ಗಳು
ಪಂದ್ಯದಲ್ಲಿ ವಿಕೆಟ್ ಪಡೆಯಲಾಗದೇ ಪರದಾಡಿದ್ದ ಟೀಂ ಇಂಡಿಯಾ ಬೌಲರ್ ಗಳು 2ನೇ ದಿನದ ನಾಲ್ಕನೇ ಸೆಷನ್ ನಲ್ಲಿ 4 ವಿಕೆಟ್ ಪಡೆದರು. ಆದರೆ ಅಷ್ಟು ಹೊತ್ತಿಗಾಗಲೇ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಪೇರಿಸಿತ್ತು. ಇಶಾಂತ್ ಶರ್ಮಾ, ಜಸ್ ಪ್ರೀತ್ ಬುಮ್ರಾ, ಆರ್ ಅಶ್ವಿನ್ ಮತ್ತು ಶಾಬಾಜ್ ನದೀಂ ತಲಾ 2 ವಿಕೆಟ್ ಪಡೆದರು.