Breaking News

ಲಾಕ್ ಡೌನ್ ಬಂಪರ್: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ 2 ಕೋಟಿ ರೂ. ಗೂ ಅಧಿಕ ಮೊತ್ತದ ದಂಡ ವಸೂಲಿ

ಬೆಂಗಳೂರು: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಎಲ್ಲ ವಲಯಗಳೂ ಮಂಕಾಗಿದೆಯಾದರೂ, ಇದೇ ಹೊತ್ತಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ಬರೊಬ್ಬರಿ 2 ಕೋಟಿ ರೂಗಳನ್ನು ವಸೂಲಿ ಮಾಡಿದ್ದಾರೆ.

ಹೌದು.. 2019ನೇ ಸಾಲಿಗಿಂತ 2020ನೇ ಸಾಲಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಅತೀ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದಾಗಿ ಮಾರ್ಚ್ 24ರಿಂದ ಮೇ 31ರವರೆಗೂ ಹೇರಲಾಗಿದ್ದ ಲಾಕ್ ಡೌನ್  ಹೊರತಾಗಿಯೂ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ದಂಡ ವಸೂಲಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ ದಂಡದ ರೂಪದಲ್ಲಿ 2,94,79,450 ರೂಗಳನ್ನು ವಸೂಲಿ ಮಾಡಿದ್ದಾರೆ. 2019ರಲ್ಲಿ 2,06,89,035 ರೂ ವಸೂಲಿಯಾಗಿತ್ತು. 

ಲಾಕ್ ಡೌನ್ ನಿಯಂತ್ರಣ ಮತ್ತು ಸೋಂಕು ನಿರ್ವಹಣೆಗಾಗಿ ಈ ಬಾರಿ ಪೊಲೀಸರು ಹೆಚ್ಚು ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದ್ದರು. ಅಲ್ಲದೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು, ಹೆಚ್ಚುವರಿ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೀಗಾಗಿ ಈ ವರ್ಷ| ಅಕ್ಚೋಬರ್ 31ರವರೆಗೂ  50,34,554 ಪ್ರಕರಣಗಳು ದಾಖಲಾಗಿತ್ತು. ಕಳೆದ ವರ್ಷ ಈ ಪ್ರಮಾಣ 39,45,831 ರಷ್ಟಿತ್ತು ಎಂದು ತಿಳಿದುಬಂದಿದೆ,

ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಚು ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ವೇಳೆ ನೂರಾರು ಚಾಲಕರು ನಿಯಮ ಉಲ್ಲಂಘಿಸಿ ಚಾಲನೆ ಮಾಡಿದ್ದರು. ಆದರೆ ಈಗ ಸಿಕ್ಕಿಬಿದ್ದಾಗ ಅವರ ಎಲ್ಲ ಹಳೆಯ ಪ್ರಕರಣಗಳಿಗೂ ಒಟ್ಟಿಗೆ ದಂಡ ಹೇರಲಾಗುತ್ತಿದೆ. ಹೀಗಾಗಿ  ಈ ಬಾರಿ ಸಂಗ್ರಹವಾದ ದಂಡ ಮೊತ್ತದ ಪ್ರಮಾಣ ಹೆಚ್ಚಾಗಿದೆ ಎಂದು ಟ್ರಾಫಿಕ್ ಪೇದೆಯೊಬ್ಬರು ಹೇಳಿದ್ದಾರೆ. ಮೂಲಗಳ ಪ್ರಕಾರ ಎಲ್ಲ ಪೊಲೀಸ್ ಅಧಿಕಾರಿಗಳಿಗೂ ಟಾರ್ಗೆಟ್ ನೀಡಲಾಗಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಎಲ್ಲ ಟ್ರಾಫಿಕ್ ಪೊಲೀಸರು ಬಹುತೇಕ ಪ್ರಕರಣ ಬುಕ್ ಮಾಡಲು  ಹಾತೊರೆಯುತ್ತಿರುತ್ತಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಇದೂ ಕೂಡ ಕಾರಣ ಎಂದು  ಹೇಳಲಾಗಿದೆ.

ಸಾಕಷ್ಟು ಕ್ರಮಗಳ ನಡುವೆಯೂ ಟ್ರಾಫಿಕ್ ಪೊಲೀಸರು ಇನ್ನೂ ಒಂದಷ್ಟು ಪ್ರಮಾಣದ ದಂಡ ವಸೂಲಿ ಮಾಡುವಲ್ಲಿ ವಿಫಲರಾಗಿದ್ದಾರೆ. ನಿಯಮ ಉಲ್ಲಂಘಿಸಿದ ಸಾಕಷ್ಟು ಚಾಲಕರ ಮನೆಗೆ ಚಲನ್ ಗಳನ್ನು ಕಳುಹಿಸಲಾಗಿದೆಯಾದರೂ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.  ಅವರ ವಿಳಾಸ ತಪ್ಪಾಗಿರುತ್ತದೆ. ಅಥವಾ ಕೊಟ್ಟಿರುವ ವಿಳಾಸದಲ್ಲಿ ಅವರೇ ಇರುವುದಿಲ್ಲ. ಇಂತಹ ಸಾಕಷ್ಟು ಪ್ರಕರಣಗಳು ನಿತ್ಯ. ಕೇಳಿಬರುತ್ತಿರುತ್ತದೆ. ದಂಡದ ಮೊತ್ತ ಬಾಕಿ ಇರುವ ಚಾಲಕರ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡದಂತೆ ಟ್ರಾಫಿಕ್ ಪೊಲೀಸ್ ಇಲಾಖೆಯಿಂದ  ಈಗಾಗಲೇ ಆರ್ ಟಿಒ ಅಧಿಕಾರಿಗಳಿಗೆ ನಿರ್ದೇಶನ ಕೂಡ ಹೋಗಿದೆ. ಅಲ್ಲದೆ ನಿಯಮ ಉಲ್ಲಂಘಿಸುವ ಚಾಲಕರ ಪರಾವಾನಗಿ ರದ್ದು ಮಾಡುವಂತೆ ಸೂಚನೆ ಕೂಡ ನೀಡಲಾಗಿದೆ. 

ಶೀಘ್ರದಲ್ಲೇ ಪೊಲೀಸರಿಗೆ ಬಾಡಿ ಕ್ಯಾಮ್ ಸೇವೆ
ಇನ್ನು ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲು ಟ್ರಾಫಿಕ್ ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮೆರಾ ಕೂಡ ನೀಡಲಾಗುತ್ತದೆ. ಇದಕ್ಕಾಗಿ ಇಲಾಖೆ ಸುಮಾರು 150 ಲಕ್ಷ ವೆಚ್ಚ ಮಾಡಲಿದ್ದು, ಈ ಬಾಡಿ ಕ್ಯಾಮೆರಾಗಳು 8 ಗಂಟೆಗಳ ಕಾಲ ನಿರಂತರ  ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×