ಮಂಗಳೂರು : ನವೆಂಬರ್ 17 ರ ಮಂಗಳವಾರ ನಡೆದ ಎರಡು ವಿಭಿನ್ನ ಘಟನೆಗಳಲ್ಲಿ, ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡ ಇಬ್ಬರು ಖದೀಮರು ಜನರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರವನ್ನು ಪಡೆದು 1.53 ಲಕ್ಷ ರೂ. ಯಷ್ಟು ಹಣವನ್ನು ವಂಚಿಸಿದ್ದಾರೆ.
ಇಲ್ಲಿನ ಪಾಂಡೇಶ್ವರ ವ್ಯಕ್ತಿಯೊಬ್ಬರಿಗೆ ನವೆಂಬರ್ 17 ರಂದು ಮೊಬೈಲ್‌ಗೆ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿಭಾಗದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಕಾರ್ಡ್‌ನ್ನು ಪುನಃ ಸಕ್ರಿಯಗೊಳಿಸಲು ಕ್ರೆಡಿಟ್ ಕಾರ್ಡ್ ಸಂಖ್ಯೆ, ಒಟಿಪಿ ಇತ್ಯಾದಿಗಳನ್ನು ನೀಡುವಂತೆ ಹೇಳಿದ್ದು ಈ ವ್ಯಕ್ತಿ ಎಲ್ಲಾ ಮಾಹಿತಿಗಳನ್ನು ನೀಡಿದ್ದರು. ಕೂಡಲೇ ವ್ಯಕ್ತಿಯ ಖಾತೆಯಿಂದ 80,000 ರೂ. ಕಡಿತಗೊಂಡಿದೆ.
ಇನ್ನೊಂದು ಘಟನೆಯಲ್ಲಿ ಮುಲ್ಕಿಯ ವ್ಯಕ್ತಿಯೊಬ್ಬರಿಗೆ ಕರೆ ಬಂದಿದ್ದು ತಾವು ಬ್ಯಾಂಕ್ ಆಫ್ ಬರೋಡಾದವರು. ವಿಜಯ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾಯಿಸಲು ನಿಮ್ಮ ಕಾರ್ಡ್‌ನ ಮಾಹಿತಿ ನೀಡಿ ಎಂದು ಹೇಳಿಕೊಂಡು ಡೆಬಿಟ್ ಕಾರ್ಡ್ ಮತ್ತು ಸಿವಿವಿ ಸಂಖ್ಯೆ ಇತ್ಯಾದಿಗಳನ್ನು ಸಂಗ್ರಹಿಸಿ ಹಂತ ಹಂತವಾಗಿ 73,182 ರೂ. ಗಳನ್ನು ವಿತ್‌ಡ್ರಾ ಮಾಡಿದ್ದಾರೆ.
ಈ ಬಗ್ಗೆ ವಂಚನೆಗೆ ಒಳಗಾದವರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow us on Social media