ಮಂಗಳೂರು, ಆ.20: ಮಂಗಳೂರು ವಿಶೇಷ ಆರ್ಥಿಕ ವಲಯದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಬೆಳ್ತಂಗಡಿ ತಾಲೂಕಿನ ಕುತ್ಲೂರು ಶಾಲೆಗೆ ಕೊಡುಗೆಯಾಗಿ ನೀಡುವ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆಯಿತು.
ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಮಂಗಳೂರು ವಿಶೇಷ ಆರ್ಥಿಕ ವಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೂರ್ಯ ನಾರಾಯಣ, ಪತ್ರಕರ್ತರ ಸಂಘ ಗ್ರಾಮ ವಾಸ್ತವ್ಯ ಮಾಡಿದ ಕುತ್ಲೂರು ಸರಕಾರಿ ಶಾಲೆಗೆ ಕಂಪ್ಯೂಟರ್ ಒದಗಿಸಬೇಕು ಎಂದು ಪತ್ರಕರ್ತರ ಸಂಘ ಮನವಿ ಮಾಡಿತ್ತು. ಅದರಂತೆ ಎಂಎಸ್‍ಇಜೆಡ್‍ನ ಸಿಎಸ್‍ಆರ್ ನಿಧಿಯಿಂದ ಸಂಘದ ಮೂಲಕ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಗಿದೆ. ಆ ಮೂಲಕ ಕುತ್ಲೂರು ಶಾಲೆ ಉಳಿಸಲು ನಾವೂ ಜೈಜೋಡಿಸಿದಂತಾಗಿದೆ. ಮುಂದಕ್ಕೆ ಕುತ್ಲೂರು ಶಾಲೆಗೆ ಅಗತ್ಯವಿರುವ ಪುಸ್ತಕಗಳನ್ನು ಒದಗಿಸಲು ಎಂಎಸ್‍ಇಜೆಡ್ ಸಿದ್ದವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಗ್ರಾಮವಾಸ್ತವ್ಯ ನಡೆಸಿದ ಕುತ್ಲೂರು ಶಾಲೆಯಲ್ಲಿ 43 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿದ್ದರು. ಶಾಲೆ ಉಳಿಸಲು ಮಕ್ಕಳು ದಾಖಲಾತಿ ಹೆಚ್ಚಿಸಲು ಪೂರಕವಾಗಿ ಶಾಲೆಗೆ ಮೂಲಸೌಲಭ್ಯ ಒದಗಿಸಬೇಕು ಎಂದು ಶಿಕ್ಷಕರು ಮತ್ತು ಎಸ್‍ಡಿಎಂಸಿ ಸದಸ್ಯರು ಮನವಿ ಮಾಡಿದ್ದರು. ಅದದಂತೆ ಸರಕಾರ, ಜಿಲ್ಲಾ ಪಂಚಾಯತ್ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಸಹಯೋಗದೊಂದಿಗೆ ಕುತ್ಲೂರು ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಎಂಎಸ್‍ಇಜೆಡ್ ನೀಡಿದ 60 ಸಾವಿರ ರೂ. ಮೌಲ್ಯದ ಕಂಪ್ಯೂಟರ್ ಸಿಸ್ಟಮ್ ಕಂಪ್ಯೂಟರ್‍ನ್ನು ಬುಧವಾರ ಕುತ್ಲೂರು ಶಾಲೆಗೆ ನೀಡಲಾಗುವುದು ಎಂದರು.
ಎಂಎಸ್‍ಇಜೆಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್, ಕಂಪೆನಿ ಸೆಕ್ರೆಟರಿ ಫಣಿಭೂಷಣ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ವಿಜಯ ಕೋಟ್ಯಾನ್ ಪಡು ವಂದಿಸಿದರು.