ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಕಳೆದ ಏಳೆಂಟು ತಿಂಗಳಲ್ಲಿ 80 ಕೋಟಿ ಬಡ ಜನರಿಗೆ ಉಚಿತವಾಗಿ ಪಡಿತರವನ್ನು ಪೂರೈಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ, ಕೊರೋನಾವೈರಸ್ ಬಿಕ್ಕಟ್ಟಿನ ನಡುವೆ ಹಸಿವು ಮತ್ತು ಅಪೌಷ್ಟಿಕತೆ ಬಗ್ಗೆ ಜಗತ್ತಿನಾದ್ಯಂತ ವಿವಿಧ ಚರ್ಚೆಗಳು ನಡೆಯುತ್ತಿದ್ದು, ದೇಶದಲ್ಲಿ 1.5 ಲಕ್ಷ ಕೋಟಿ ಮೊತ್ತದ ಆಹಾರ ಧಾನ್ಯಗಳನ್ನು ಬಡಜನರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ಅಪೌಷ್ಟಿಕತೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಸತುವುಗಳಂತಹ ಪೌಷ್ಟಿಕ ಪದಾರ್ಥ ಹೆಚ್ಚಾಗಿರುವ ಆಹಾರ ಬೆಳೆಗಳನ್ನು ದೇಶದಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿದ್ದು, ದೊಡ್ಡ ಸಾಧನೆಯಾಗಿದೆ.ಅದರೊಂದಿಗಿನ ನಮ್ಮ ಚಾರಿತ್ರಿಕ ಒಡನಾಟ ಹಾಗೂ ಕೊಡುಗೆಗೆ ಸಾಕಷ್ಟು ಸಂತೋಷವಾಗುತ್ತಿದೆ ಎಂದರು.
ವಿಶ್ವ ಆಹಾರ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತ ಅಪೌಷ್ಟಿಕತೆಯನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲಾರನ್ನು ಅಭಿನಂದಿಸುವುದಾಗಿ ಹೇಳಿದ ಪ್ರಧಾನಿ, ಇತ್ತೀಚಿಗೆ ಅಭಿವೃದ್ಧಿಪಡಿಸಲಾದ ಎಂಟು ಪ್ರಭೇದದ ಬೆಳೆಗಳನ್ನು ದೇಶಕ್ಕೆ ಸಮರ್ಪಿಸಿದರು. ಹಸಿವು ಮತ್ತು ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ಸಂಕಲ್ಪಕ್ಕೆ ಈ ಸಮಾರಂಭ ಸಾಕ್ಷಿಯಾಯಿತು.
Follow us on Social media