ಹೈದರಾಬಾದ್: ಸತತ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಹೈದರಾಬಾದ್ ಮತ್ತು ತೆಲಂಗಾಣ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದ್ದು ಜನರ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಮಳೆ, ಪ್ರವಾಹ ವಿಕೋಪಕ್ಕೆ ಇದುವರೆಗೆ ಮೃತಪಟ್ಟವರ ಸಂಖ್ಯೆ 32ಕ್ಕೇರಿದ್ದು, ಹೈದರಾಬಾದ್ ನಲ್ಲಿಯೇ 25 ಮಂದಿ ಮೃತಪಟ್ಟಿದ್ದಾರೆ. ಮಹಬೂಬ್ ನಗರ ಜಿಲ್ಲೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ತೀವ್ರ ಮಳೆಗೆ ಮನೆಗಳ ಗೋಡೆ ಕುಸಿದು, ವಿದ್ಯುತ್ ಪ್ರವಹಿಸಿ ಮತ್ತು ಕಾಲುವೆಗಳಲ್ಲಿ ಕೊಚ್ಚಿಹೋಗಿ ಹೈದರಾಬಾದ್ ನ ಹೊರವಲಯಗಳಲ್ಲಿ 9 ಮಂದಿ ಕಾಣೆಯಾಗಿದ್ದಾರೆ. ಗಂಗನ್ ಪಹಾಡ್ ನಲ್ಲಿ ಮೂವರು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ. ಮೈಲಾರ್ದೇವಪಲ್ಲಿಯಲ್ಲಿ ಇಬ್ಬರು ಇದೇ ರೀತಿ ಕಾಣೆಯಾಗಿದ್ದಾರೆ. ಬಂಜಾರಾ ಹಿಲ್ಸ್ ನಲ್ಲಿ ವೈದ್ಯರೊಬ್ಬರ ಮೇಲೆ ವಿದ್ಯುತ್ ಪ್ರವಹಿಸಿ ನೀರಿನಲ್ಲಿ ಕೊಚ್ಚಿ ಹೋದರೆ ದಿಲ್ಸುಕ್ ನಗರದಲ್ಲಿ ಮೂರು ವರ್ಷದ ಮಗು ಅಪಾರ್ಟ್ ಮೆಂಟ್ ನಲ್ಲಿ ನೀರು ನುಗ್ಗಿ ಕೊಚ್ಚಿ ಹೋಗಿದ್ದಾಳೆ.
ಚಂದ್ರಯಾನಗುಟ್ಟದಲ್ಲಿ ಕಳೆದ ಮಂಗಳವಾರ ರಾತ್ರಿ ಬಂಡೆಯೊಂದು ಮನೆಗೆ ಅಪ್ಪಳಿಸಿ ಗೋಡೆ ಕುಸಿದುಬಿದ್ದು 8 ಮಂದಿ ಮೃತಪಟ್ಟಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಪೌರಾಡಳಿತ ಸಚಿವ ಕೆ ಟಿ ರಾಮ ರಾವ್ ಪರಿಸ್ಥಿತಿಯನ್ನು ನಿಗಾವಹಿಸುತ್ತಿದ್ದು, ಜನರ ಸಂಕಷ್ಟಕ್ಕೆ ಧಾವಿಸುವಂತೆ ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ.
ಎನ್ ಡಿಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ: ಕೇಂದ್ರ ರಕ್ಷಣಾ ಪಡೆಯಿಂದ ಹೈದರಾಬಾದ್ ನಲ್ಲಿ ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ.
Follow us on Social media