ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11.2 ಕಿ.ಗ್ರಾಂ ಚಿನ್ನಾಭರಣವನ್ನು DRI ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಅವರು ನೀಡಿದ ಮಾಹಿತಿಯನ್ವಯ ಕೋಯಿಕ್ಕೋಡಿನ ವಿವಿಧೆಡೆ ನಡೆಸಿದ ದಾಳಿಯಲ್ಲಿ ಮತ್ತೆ 3.2 ಕಿ.ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕೊಚ್ಚಿ, ಕೋಯಿಕ್ಕೋಡ್, ಕಣ್ಣೂರು ಡಿಆರ್ಐ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಸೋಮವಾರ ದುಬೈ, ಶಾರ್ಜಾ, ರಿಯಾದ್ ಮುಂತಾದೆಡೆಯಿಂದ 4 ಪ್ರತ್ಯೇಕ ವಿಮಾನದಲ್ಲಿ ಆಗಮಿಸಿದ ಕೋಯಿಕ್ಕೋಡ್, ಕಣ್ಣೂರು, ವಯನಾಡ್, ಬೆಂಗಳೂರು ನಿವಾಸಿಗಳಿಂದ ಈ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಶಾರ್ಜಾದಿಂದ ಆಗಮಿಸಿದ ವಯನಾಡ್ ನಿವಾಸಿ ಆರ್ಷಾದ್, ಬೆಂಗಳೂರು ನಿವಾಸಿ ಬಶೀರ್, ದುಬೈಯಿಂದ ಆಗಮಿಸಿದ ಕಣ್ಣೂರು ನಿವಾಸಿ ಅಂಸೀರ್, ರಿಯಾದ್ನಿಂದ ಆಗಮಿಸಿದ ಕೋಯಿಕ್ಕೋಡ್ ನಿವಾಸಿ ಅಬ್ದುಲ್ಲ ಬಂಧಿತರು.
ಇವರಿಂದ ಒಟ್ಟು 11.2 ಕಿ.ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಇವರು ನೀಡಿದ ಮಾಹಿತಿಯನ್ವಯ ಕೋಯಿಕ್ಕೋಡಿನ ವಿವಿಧ ಕಡೆ ಕಾರ್ಯಾಚರಣೆ ನಡೆಸಿ, 3.2 ಕಿ.ಗ್ರಾಂ ಚಿನ್ನದ ಬಿಲ್ಲೆ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ಚಿನ್ನದ ಮೌಲ್ಯ 4.15 ಕೋಟಿ ಎಂದು ಅಂದಾಜಿಸಲಾಗಿದೆ. ಬಂಧಿತರು ಚಿನ್ನ ಸಾಗಾಟದ ಮಧ್ಯವರ್ತಿಗಳಾಗಿದ್ದು, ಇದರ ಹಿಂದೆ ಬೃಹತ್ ಜಾಲ ಕಾರ್ಯಾಚರಿಸುತ್ತಿರುವುದಾಗಿ DRI ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.