ನವದೆಹಲಿ: 2020ರ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಡ್ರೀಮ್ 11 ಪಡೆದುಕೊಂಡಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಐಪಿಎಲ್ ಪ್ರಾಯೋಕತ್ವದಿಂದ ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ ಹಿಂದಕ್ಕೆ ಸರಿದ ಬೆನ್ನಲ್ಲೇ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಭಾರಿ ಪೈಪೋಟಿ ಎದುರಾಗಿತ್ತು. ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆ ಕೂಡ ಬಿಡ್ ಮಾಡುವುದಾಗಿ ಹೇಳಿತ್ತು. ಆದರೆ ಅಂತಿಮವಾಗಿ ಡ್ರೀಮ್ 11 ಸಂಸ್ಥೆ ಐಪಿಎಲ್ 2020 ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ.
ಈ ಬಗ್ಗೆ ಸ್ವತಃ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರು ಮಾಹಿತಿ ನೀಡಿದ್ದು, ‘ವಿವೋ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದಕ್ಕೆ ಸರಿಯಬೇಕಾದ ಸಂದರ್ಭ ಬಂದ ಕಾರಣ ಹೊಸ ಪ್ರಾಯೊಜಕರನ್ನು ಹುಡುಕಬೇಕಾದ ಅನಿವಾರ್ಯತೆ ಬಿಸಿಸಿಐಗೆ ಬಂದಿತ್ತು. ಅದಕ್ಕಾಗಿ ಬಿಡ್ ಆಹ್ವಾನಿಸಿದ್ದ ಬಿಸಿಸಿಐಗೆ ಸಾಕಷ್ಟು ಕಂಪನಿಗಳು ಮುಂದೆ ಬಂದಿತ್ತು. ಎಲ್ಲರನ್ನೂ ಹಿಂದಿಕ್ಕಿರುವ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ‘ಡ್ರೀಮ್ 11 ಈ ಬಾರಿಯ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು ಪಡೆಯಲು ದೊಡ್ಡ ಮೊತ್ತದ ಹಣ ಹೂಡಿದೆ. 222 ಕೋಟಿ ರೂಪಾಯಿ ಮೊತ್ತಕ್ಕೆ ಡ್ರೀಮ್ 11 ಈ ಬಾರಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಈ ಮೂಲಕ ಪ್ರಮುಖ ಕಂಪನಿಗಳನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ವಿವೋ ಕಂಪನಿ ಶೀರ್ಷಿಕೆ ಪ್ರಾಯೋಜಕತ್ವಕ್ಕೆ 440 ಕೋಟಿಯ ವಾರ್ಷಿಕ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಟೂರ್ನಿ ಆರಂಭಕ್ಕೆ 45 ದಿನಗಳಿರುವಾಗ ಅನಿವಾರ್ಯವಾಗಿ ಟೂರ್ನಿಯಿಂದ ವಿವೋ ಹೊರಗುಳಿಯುವ ನಿರ್ಧಾರಕ್ಕೆ ಬಂದಿತ್ತು. ಹೀಗಾಗಿ ಆ ಮೌಲ್ಯದ ಅರ್ಧದಷ್ಟು ಮೊತ್ತ ಲಭಿಸಿದರೂ ಬಿಸಿಸಿಐ ಪಾಲಿಗೆ ಲಾಭ ಎಂಬ ವಿಮರ್ಶೆಗಳು ನಡೆದಿತ್ತು. ಅಂದುಕೊಂಡಂತೆಯೇ ಆ ಮೊತ್ತವವನ್ನು ಬಿಸಿಸಿಐ ಡ್ರೀಮ್ 11 ಮೂಲಕ ಪಡೆದುಕೊಂಡಿದೆ.
Follow us on Social media