ನವದೆಹಲಿ: ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಿಳಾ ಸಶಕ್ತೀಕರಣ ಬಗ್ಗೆ ಮಾತನಾಡಿದರು. ಅದರಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ನಮ್ಮ ಸೋದರಿಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಯಾವತ್ತೂ ಕಾಳಜಿವಹಿಸುತ್ತದೆ. ದೇಶದಲ್ಲಿರುವ 6 ಸಾವಿರ ಜನೌಷಧಿ ಕೇಂದ್ರಗಳ ಮೂಲಕ ಸುಮಾರು 5 ಸಾವಿರ ಹೆಣ್ಣುಮಕ್ಕಳು ಕೇವಲ ಒಂದು ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಪಡೆದುಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳ ಮದುವೆಗೆ ನಾವು ಸಮಿತಿಗಳನ್ನು ರಚಿಸಿದ್ದು ಆ ಮೂಲಕ ಹಣವನ್ನು ಸರಿಯಾದ ಸಮಯಕ್ಕೆ ಬಳಸಬಹುದಾಗಿದೆ ಎಂದಿದ್ದಾರೆ.
ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳಾ ಸಶಕ್ತೀಕರಣ ಮಾಡಲಾಗುತ್ತಿದೆ. ನೌಕಾಪಡೆ, ವಾಯುಪಡೆಗಳಲ್ಲಿ ಮಹಿಳೆಯರನ್ನು ಯುದ್ಧಕ್ಕೆ ಕೂಡ ಕಳುಹಿಸಲಾಗುತ್ತದೆ. ಇಂದು ಮಹಿಳೆಯರು ನಾಯಕತ್ವ ವಹಿಸುತ್ತಿದ್ದಾರೆ. ತ್ರಿವಳಿ ತಲಾಖ್ ನ್ನು ರದ್ದುಪಡಿಸಿದ್ದೇವೆ ಎಂದರು.
ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡುವಾಗ ಈ ರೀತಿ ಮಹಿಳೆಯರ ಋತುಮತಿ ವಿಷಯವನ್ನು ಪ್ರಸ್ತಾಪಿಸುವುದು ಬಹಳ ಅಪರೂಪ ಎಂದು ಹಲವರು ಪ್ರಧಾನಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸಿಸಿದ್ದಾರೆ.
Follow us on Social media