ಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಭಾಶಯಗಳನ್ನು ಕೋರಿದ್ದು, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಿದರು.
ಕೊರೋನಾ ವೈರಸ್ ಸಂಕಷ್ಟದ ನಡುವೆಯು ದೇಶದಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜ್ಯದಲ್ಲೂ ಕೂಡ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳದಿಂದ ಆಚರಿಸಲಾಗುತ್ತಿದೆ.
ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಸವಾಲು ಎದುರಿಸುವಲ್ಲಿ ನಮ್ಮ ಸರ್ಕಾರ ಅಚಲವಾಗಿದೆ. ಒಂದು ವರ್ಷದಲ್ಲಿ ನಮಗೆ ಹಲವು ಸಮಸ್ಯೆಗಳು ಎದುರಾಗಿದ್ದು, ಸಮಸ್ಯೆಗಳ ನಡುವೆಯೂ ಅಭಿವೃದ್ಧಿ ಎಂಬ ಚಕ್ರವನ್ನು ಚಲಿಸುತ್ತಿದ್ದೇವೆ. ನೆರೆ ಹಾಗೂ ಕೊರೋನಾ ವೈರಸ್’ನ್ನು ಮೆಟ್ಟಿನಿಂತಿದ್ದೇವೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಕಾಯಕವೇ ಕೈಲಾಸ, ಸರ್ಕಾರದ ಕೆಲಸ ದೇವರ ಕೆಲ ಎನ್ನುವ ತತ್ವವನ್ನು ಪಾಲನೆ ಮಾಡುತ್ತಿದ್ದೇವೆಂದು ಹೇಳಿದರು.
ಕೊರೋನಾ ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡಿದ್ದೇವೆ. ಕೇವಲ ಬೆಂಗಳೂರು ನಗರವಷ್ಟೇ ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲೂ ಫೀವರ್ ಕ್ಲಿನಿಕ್ ಹಾಗೂ ಕೊರೋನಾ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿದ್ದೇವೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ 1 ಕೋಟಿ 30 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಲಾಕ್ಡೌನ್ ನಿಂದ ಆರ್ಥಿಕ ವ್ಯವಹಾರ ಕುಸಿತ ಕಂಡಿತು. ಇದೆಲ್ಲವನ್ನೂ ದಿಟ್ಟವಾಗಿ ಎದುರಿಸಿ ವಾಣಿಜ್ಯ ಚಟುವಟಿಕೆಗಳನ್ನು ಮತ್ತೆ ಚೇತರಿಕೆ ಮಾಡುವ ಕೆಲಸ ಮಾಡಿದ್ದೇವೆಂದು ಹೇಳಿದ್ದಾರೆ.
ಲಾಕ್ಡೌನ್ ನಿಂದ ಅಸಂಘಟಿತ ನೆರವಿಗೆ ಸರ್ಕಾರ ಪರಿಹಾರ ನೀಡಿದೆ. 3 ಸಾವಿರ ಕೋಟಿ ಪರಿಹಾರ ನೀಡಿದ್ದೇವೆ. ಕೊರೋನಾ ವಿರುದ್ಧ ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಹಗಲಿರುಳು ದುಡಿಯುತ್ತಿದ್ದು, ಕೊರೋನಾ ವಾರಿಯರ್ಸ್ ಮೃತಪಟ್ಟರೆ ರೂ.30 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕೊರೋನಾ ವಾರಿಯರ್ಸ್ ಕೂಡ ದೇಶ ಕಾಯುವ ಯೋಧರಷ್ಟೇ ಸಮರ್ಥರಾಗಿದ್ದಾರೆಂದು ಶ್ಲಾಘಿಸಿದ್ದಾರೆ.
Follow us on Social media