ವಿಜಯವಾಡ: ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ 30 ಮಂದಿಯನ್ನು ರಕ್ಷಿಸಿದ್ದಾರೆ. ಹೊಟೇಲ್ ನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ವಿಜಯವಾಡ ನಗರ ಪಾಲಿಕೆ ಪಡೆದುಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕಳೆದ 6ರಂದು ಅಹಮದಾಬಾದ್’ನ ನವರಂಗಪುರದಲ್ಲಿರುವ ಶ್ರೇಯ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ ರೋಗಿಗಳು ಸಜೀವ ದಹನವಾಗಿದ್ದರು.
ಈ ದುರ್ಘಟನೆ ಇಂದು ನಸುಕಿನ ಜಾವ 5 ಗಂಟೆಗೆ ಸಂಭವಿಸಿದೆ. ಹೊಟೇಲ್ ನಲ್ಲಿ ಸುಮಾರು 22 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಕಿ ದುರಂತ ನಂತರ ಎಲ್ಲರನ್ನೂ ಸ್ಥಳಾಂತರಿಸುತ್ತಿದ್ದೇವೆ. ಪ್ರಾಥಮಿಕ ವರದಿಯಿಂದ ಬೆಂಕಿ ಹತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬಂದಿದೆ. ಅದನ್ನು ಖಚಿತಪಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆಘಾತ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಕಿ ಅನಾಹುತದ ಬಗ್ಗ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು, ಘಟನೆಗೆ ಏನು ಕಾರಣ ಎಂಬ ಬಗ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದು, ಗಾಯಗೊಂಡವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
Follow us on Social media