ಉಡುಪಿ: ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಹೊಳೆಯಂತಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಕಾರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ಕುಂದಾಪುರದ ಬಸ್ರೂರು ಬಳಿ ಮೂರುಕೈ ಜಂಕ್ಷನ್ ಬಳಿ ನಡೆದಿದೆ.
ರಾಷ್ಟ್ರಿಯ ಹೆದ್ದಾರಿ 66 ರ ಬಸ್ರೂರು ಮೂರು ಕೈಯಿಂದ ಟಿಟಿ ರಸ್ತೆ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಮತ್ತೊಂದೆಡೆ ಕುಂದಾಪುರದಿಂದ ಕಾರ್ಯಕ್ರಮ ಮುಗಿಸಿ ಉಡುಪಿಯತ್ತ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೊರಟಿದ್ದರು. ಇದೇ ವೇಳೆ ಹೆದ್ದಾರಿ ಹೋರಾಟ ಸಮಿತಿ, ರಿಕ್ಷಾ ಚಾಲಕರು, ಸ್ಥಳೀಯ ಅಂಗಡಿ ಮಾಲೀಕರು ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಚಿವರ ಕಾರಿಗೆ ಅಡ್ಡಹಾಕಿದ್ದರು.
ಈ ವೇಳೆ ಸಚಿವರು ಹಾಗೂ ಸ್ಥಳೀಯರ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಡಿಸಿ ಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಕರೆ ಮಾಡಿ, ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಘಟನೆಯ ವೇಳೆ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ, ಗಣೇಶ್ ಮೆಂಡನ್, ಹಲವು ರಿಕ್ಷಾ ಚಾಲಕರು, ಅಂಗಡಿ ಮಾಲಿಕರು, ಸಾರ್ವಜನಿಕರು ಸ್ಥಳದಲ್ಲಿದ್ದರು. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಹೆದ್ದಾರಿಯಲ್ಲಿ ನೀರು ನಿಂತು ಹೊಂಡ – ಗುಂಡಿಗಳು ನಿರ್ಮಾಣ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
Follow us on Social media