ವಿಜಯಪುರ: ನಾವು ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ' ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಸರಳವಾಗಿ ಮನೆಯಲ್ಲೇ ಗಣೇಶೋತ್ಸವ ಆಚರಿಸಿ ಎಂದು ಕರೆಕೊಟ್ಟಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್ ಅವರು,
ಸರಕಾರ ಮಾಲ್ ಹಾಗೂ ಬಾರ್ ತೆರೆಯಲು ಅವಕಾಶ ಕೊಡುತ್ತದೆ. ಗಣಪತಿ ಪ್ರತಿಷ್ಠಾಪನೆಗೆ ಯಾಕೆ ಅವಕಾಶ ಕೊಡುವುದಿಲ್ಲ? ನಾವು ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಗಣೇಶ ಚತುರ್ಥಿ ಆಚರಿಸುತ್ತೇವೆ’ ಎಂದು ಹೇಳಿದರು. ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಜನರ ಕಷ್ಟಕಾಲದಲ್ಲೂ ಸರಕಾರ ದುಡ್ಡುಮಾಡುತ್ತಿದೆ. ಈ ಕುರಿತು ವಿರೋಧ ಪಕ್ಷಗಳು ಆರೋಪ ಮಾಡಿರುವುದು ಸರಿಯಿದೆ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದರು.