ಇಡುಕ್ಕಿ ಜಿಲ್ಲೆ(ಕೇರಳ):ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ರೀತಿಯ ಮಳೆಯಾಗುತ್ತಿದ್ದು ಅಲ್ಲಲ್ಲಿ ಪ್ರಾಕೃತಿಕ ದುರಂತಗಳು ಸಂಭವಿಸುತ್ತಿವೆ.
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮನ್ನಾರ್ ನ ರಾಜಮಲಾದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಮಾದರಿಯಲ್ಲಿ ಪೆಟ್ಟಿಮುಡಿ ಬೆಟ್ಟ ಇಂದು ನಸುಕಿನ ಜಾವ ಕುಸಿದು ಬಿದ್ದು ಐವರು ಮೃತಪಟ್ಟು ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ.
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 80 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ ಐವರ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಬೇಗನೆ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.
ಇದುವರೆಗೆ ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Follow us on Social media