ಶ್ರೀನಗರ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಗಿರೀಶ್ ಮುರ್ಮು ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಕೋವಿಂದ್ ಅವರು ಗುರುವಾರ ಅಂಗೀಕರಿಸಿದ್ದಾರೆಂದು ತಿಳಿದುಬಂದಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜೀನಾಮೆ ಅಂಗೀಕರಿಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ಅವರು ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮನೋಜ್ ಸಿನ್ಹಾ ಅವರು ಲೋಕಸಭೆಯಲ್ಲಿ ಸಂಸದೀಯ ಕ್ಷೇತ್ರವಾಗಿರುವ ಉತ್ತರಪ್ರದೇಶದ ಘಾಜಿಪುರದ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ಅಫ್ಜಲ್ ಅನ್ಸಾರಿಯವರನ್ನೂ ಸೋಲಿಸಿದ್ದರು. ಅಲ್ಲದೆ, ಕೇಂದ್ರದಲ್ಲಿ ಕಿರಿಯ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹೊಸದಾಗಿ ರಚನೆಗೊಂಡ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಮೊದಲ ಲೆಫ್ಟಿನೆಂಟ್ ಗೌರ್ನರ್ ಆಗಿ 2019 ರ ಅಕ್ಟೋಬರ್ 25 ರಂದು ಗಿರೀಶ್ ಮುರ್ಮು ನೇಮಕಗೊಂಡಿದ್ದರು. ಒಂದು ವರ್ಷ ಅವಧಿಪೂರ್ಣಗೊಳಿಸುವುದಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಂವಿಧಾನಿಕ ಹುದ್ದೆಯಾದ ಸಿಎಜಿ ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ 65 ವರ್ಷ ಪೂರ್ಣಗೊಳ್ಳಲಿದ್ದು ಅವರ ಅವಧಿಯೂ ಈ ವಾರ ಪೂರ್ಣಗೊಳ್ಳಲಿದೆ. ಸಂದರ್ಭದಲ್ಲೇ ಮುರ್ಮು ರಾಜೀನಾಮೆ ನೀಡಿದ್ದಾರೆ.
Follow us on Social media