ಹೈದರಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ಭೂ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿರುವುದಕ್ಕೆ ಸಂಸದ ಹಾಗೂ ಎಂಐಎಂ ಪಕ್ಷದ ಮುಖ್ಯಸ್ಥ ಅಸದುದ್ದೀನ್ ಒವೈಸಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ದೇಶದಲ್ಲಿ “ಹಿಂದುತ್ವವಾದ” ಕ್ಕೆ ಅಡಿಗಲ್ಲು ಇರಿಸಿದ್ದಾರೆ ಎಂದು ಟೀಕಿಸಿದ್ದಾರೆ. ಬುಧವಾರ ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ದೇಶದ ಪ್ರಧಾನ ಮಂತ್ರಿಗೆ ಯಾವುದೇ ಧರ್ಮದ ಮೇಲೆ ಪ್ರೀತಿ ಇರಬಾರದು ಎಂದು ಹೇಳಿದ್ದಾರೆ. ದೇವಾಲಯ ಅಥವಾ ಮಸೀದಿ ದೇಶದ ಸಂಕೇತವಲ್ಲ ಎಂದು ಅವರು ಹೇಳಿದ್ದಾರೆ. ಅಯೋಧ್ಯೆ ವಿವಾದದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಸುಪ್ರೀಂ ಕೋರ್ಟ್‌ಗೆ ಸತ್ಯಕ್ಕೆ ದೂರವಾದ ಅಂಶಗಳನ್ನು ಹೇಳಿದ್ದಾರೆ ಎಂದು ಒವೈಸಿ ಆರೋಪಿಸಿದರು.
ಇದಕ್ಕೂ ಮುನ್ನ ಟ್ವಿಟರ್ ಮೂಲಕ ಓವೈಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಾಬ್ರಿ ಮಸೀದಿ ಇತ್ತು, ಇದೆ, ಖಚಿತವಾಗಿ ಇರಲಿದೆ” ಎಂಬ ಅರ್ಥ ಬರುವ ಹ್ಯಾಶ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.
ರಾಮ ಮಂದಿರ ಭೂಮಿ ಪೂಜೆಗೆ ಹಾಜರಾಗುವ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಈ ಹಿಂದೆ ಅಸದುದ್ದೀನ್ ಒವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಯೋಧ್ಯ ರಾಮ ಜನ್ಮ ಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ವಿವಾದಿತಕ್ಕೆ ಕಾರಣವಾಗಿದ್ದ ೨.೭೭ ಎಕರೆ ಭೂಮಿಯನ್ನು ರಾಮ ಲಲ್ಲಾಗೆ ಸೇರಲಿದೆ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಆಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ ಗೆ ಐದು ಎಕರೆ ಭೂಮಿ ಹಂಚಿಕೆ ಮಾಡಬೇಕೆಂದು ಆದೇಶಿಸಿತ್ತು.
ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯಿಂದ ೧೮ ಕಿ.ಮೀ ದೂರದಲ್ಲಿರುವ ಲಕ್ನೋ ಹೆದ್ದಾರಿ ಬಳಿ ಭೂಮಿ ಮಂಜೂರು ಮಾಡಿದೆ. ಇನ್ನೂ ಬುಧವಾರ, ಅಯೋಧ್ಯೆಯಲ್ಲಿ ಹಿಂದೂಗಳ ಬಹುನಿರೀಕ್ಷಿತ ರಾಮ ಮಂದಿರವನ್ನು ನಿರ್ಮಿಸುವ ಮೊದಲ ಹೆಜ್ಜೆ ಇರಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರೆವೇರಿಸಿದ್ದಾರೆ.
Follow us on Social media