Breaking News

ರಾಮಮಂದಿರ ನಿರ್ಮಾಣ ದೇಶದ ಜನರ ಶ್ರೀಮಂತಿಕೆಯ ಪ್ರತೀಕ: ಡಿ.ಕೆ. ಶಿವಕುಮಾರ್

ಕಲಬುರಗಿ: ರಾಮ ಮಂದಿರ ನಿರ್ಮಾಣ ಯಾರ ಸ್ವತ್ತಲ್ಲ. ಅದು ದೇಶದ ಜನರ ಹೃದಯ ಶ್ರೀಮಂತಿಕೆಯ ಪ್ರತೀಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ನಮಗೇನು ಆಹ್ವಾನ ನೀಡುವುದು ಬೇಕಿಲ್ಲ. ನಾನು ಟಿವಿಯಲ್ಲೇ ನೋಡಿ ಸಂತಸ ಪಡುತ್ತೇವೆ. ಕಾಂಗ್ರೆಸ್ ನ ಎಲ್ಲರ ಹೃದಯದಲ್ಲಿಯೂ ರಾಮನಿದ್ದಾನೆ ಎಂದರು.  ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. 

ಕೊವೀಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಭಾರೀ ಲೂಟಿ ಮಾಡುತ್ತಿದ್ದು, ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೊರೋನಾ ಸೋಂಕು ಕಂಡು ಬಂದ ನಂತರದಿಂದ ಸರ್ಕಾರ ಹಣ ಲೂಟಿಯಲ್ಲಿ ತೊಡಗಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಪ್ರತಿಯೊಬ್ಬ ಸಚಿವರು ತಮಗೆಷ್ಟು ಸಿಗುತ್ತದೆ ಎಂದು ಯೋಚಿಸುತ್ತಿದ್ದಾರೆ. ಹೀಗಾಗಿ, ನಾವು ಸರ್ಕಾರಕ್ಕೆ ಲೆಕ್ಕ ಕೇಳುವ ಅಭಿಯಾನ ಆರಂಭಿಸಿದ್ದೇವೆ ಎಂದು ಹೇಳಿದರು.

21 ದಿನದಲ್ಲೇ ಕೊರೋನಾ ಯುದ್ಧ ಗೆಲ್ಲುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಲಾಕ್ ಡೌನ್, ಸೀಲ್ ಡೌನ್ ಎಲ್ಲಾ ಮುಗಿದು 120 ದಿನ ಕಳೆದರೂ ನಾವೂ ಸೋಂಕಿನಿಂದ ಮುಕ್ತವಾಗಿಲ್ಲ. ಕಾಂಗ್ರೆಸ್ ನಾಯಕರೆಲ್ಲ ಸೇರಿ ಕೊವೀಡ್ ನಿರ್ವಹಣೆಗೆ ಸಲಹೆ ನೀಡಿದ್ದೇವೆ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಉತ್ತಮ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿವೆ. ಆಸ್ಪತ್ರೆ ಮುಖ್ಯಸ್ಥರನ್ನು ಕರೆದು ಮಾತನಾಡುವ ಗೋಜಿಗೆ ಸರ್ಕಾರ ಹೋಗಿಲ್ಲ ಎಂದರು. 

ಸರ್ಕಾರದವರು ತಾವೇ 10,500 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸುವುದಾಗಿ ಹೇಳಿದರು. ಮೊದಲು ದಿನವೊಂದಕ್ಕೆ 800 ರಂತೆ ಬಾಡಿಗೆಗೆ ಆಧಾರದ ಮೇಲೆ ಹಾಸಿಗೆಗಳನ್ನು ಬುಕ್ ಮಾಡಿದರು. ಅಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾದ ನಂತರ ಖರೀದಿ ಮಾಡುವುದಾಗಿ ಹೇಳಿ, ತಮ್ಮ ನಿಲವು ಬದಲಿಸಿದರು. ಸೋಂಕಿತರು ಬಳಸಿದ ಬಳಿಕ ಬೆಡ್ ಗಳನ್ನು ಹಾಸ್ಟೆಲ್ ಗಳಿಗೆ ಬಳಸುವುದಾಗಿ ಹೇಳಿದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದಾಗ ಎಲ್ಲೂ ಬಳಸದೇ ಸುಡುವುದಾಗಿ ವ್ಯತಿರಿಕ್ತ ಹೇಳಿಕೆ ಕೊಟ್ಟರು. ಹೀಗೆ ಬಿಜೆಪಿ ಸರ್ಕಾರ ದ್ವಂದ್ವ ಮತ್ತು ಭ್ರಷ್ಟತೆಯಲ್ಲಿ ಮುಳುಗಿದೆ ಎಂದರು. 

ಆಹಾರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದನ್ನು ನಾವೂ ಸಾಬೀತು ಪಡಿಸಿದಾಗ ಆರೋಪಿಗಳ ವಿರುದ್ಧ ಒಂದೇ ಒಂದು ದೂರು ದಾಖಲು ಆಗದಂತೆ ನೋಡಿಕೊಂಡರು. ಅವ್ಯವಹಾರದಲ್ಲಿ ಭಾಗಿಯಾದವರನ್ನು ಬಂಧಿಸಲೂ ಇಲ್ಲ ಶಿಕ್ಷಿಸಲೂ ಇಲ್ಲ. ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಆಕ್ಷಿಜನ್ ಹೀಗೆ ಎಲ್ಲದರಲ್ಲೂ ಮೂರು ನಾಲ್ಕು ಪಟ್ಟು ಜಾಸ್ತಿ ಹಣ ನೀಡಿ ಖರೀದಿ ಮಾಡಿ ಅವ್ಯವಹಾರ ನಡೆಸಿದ್ದಾರೆ. ಇವೆಲ್ಲವನ್ನೂ ಪ್ರಶ್ನಿಸಿದರೆ ನನಗೆ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೋಟಿಸು ನೀಡುತ್ತಾರೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಾಧ್ಯವಾದರೇ, ನಿಮ್ಮ ಅವ್ಯವಹಾರ ಬಯಲು ಮಾಡಿದ ಮಾಧ್ಯಮವರಿಗೆ ನೋಟಿಸು ಕೊಡಿ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದ ಅವರು, ಬಿಜೆಪಿ ನೋಟಿಸ್ ಗಳಿಗೆ ನಾವು ಹೆದರುವುದಿಲ್ಲ. ನಾವೂ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ನಿಮ್ಮ ನೂರು ನೋಟಿಸು ಎದುರಿಸುವ ತಾಕತ್ತನ್ನು ಜನ ನಮಗೆ ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ನಮ್ಮ ಸರ್ಕಾರವನ್ನು ಹತ್ತು ಪರ್ಸೆಂಟ್ ಸರ್ಕಾರ ಎಂದಿದ್ದರು. ಈಗ ಎಷ್ಟು ಪರ್ಸೆಂಟ್ ಇದೆ ಗೊತ್ತಾ? ಇನ್ನೂರು ಮುನ್ನೂರು ಪರ್ಸೆಂಟ್ ನಡೀತಿದೆ. ನಮ್ಮ ಸರ್ಕಾರದಲ್ಲಿ ಅವ್ಯವಹಾರ ನಡೆದಿದ್ದರೆ ತಪ್ಪು ಮಾಡಿದ್ದರೆ ನಮಗೆ ಶಿಕ್ಷಿಸಿ ಎಂದ ಅವರು, ಗುಳೆ ಹೋದವರನ್ನು ಸರ್ಕಾರ ತಡೆಯಲಿಲ್ಲ. ಕೆಲಸ ಕಳೆದುಕೊಂಡವರಲ್ಲಿ ಆತ್ಮಸ್ಥೈರ್ಯ ತುಂಬಲಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬೆಡ್ ಕೊರತೆ ಇದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಮ್ಮ ಸ್ವಂತ ಹಣದಲ್ಲಿ 650 ಬೆಡ್ ಖರೀದಿ ಮಾಡಿ ಕಲಬುರಗಿಗೆ ಕಳಿಸಿದರೇ ಅದು ಕಾಂಗ್ರೆಸ್ ನವರ ಬೆಡ್ ಅದು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯದಲ್ಲೂ ರಾಜಕೀಯ ಮಾಡಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಶಾ ಕಾರ್ಯಕರ್ತೆಯರು, ಮಡಿವಾಳರು, ಚಾಲಕರು, ನೇಯ್ಗೆಯವರು, ಸವಿತಾ ಸಮಾಜದ ಶ್ರಮಿಕರಿಗೆ ಆರ್ಥಿಕ ಸಹಾಯ ಮಾಡಿಲ್ಲ. ವೃತ್ತಿನಿರತ ಶ್ರಮಿಕರಿಗೆ ಆರ್ಥಿಕ ನೆರವು ನೀಡದೇ ಹೋದರೆ ಏತಕ್ಕಾಗಿ ಸರ್ಕಾರ ಬೇಕು ? ಆಶಾ ಕಾರ್ಯಕರ್ತೆಯರು 21 ದಿನದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಅವರ ಸಮಸ್ಯೆ ಬಗೆಹರಿಸಿದ್ದೀರಾ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲ. ಒಂದು ವರ್ಷದವರೆಗೆ ವಾಣಿಜ್ಯ ಆಸ್ತಿ, ಗೃಹ ಆಸ್ತಿ ಸೇರಿ ವಾಹನದ ತೆರಿಗೆ ತೆಗೆದುಕೊಳ್ಳಬಾರದು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ. ಜತೆಗೆ ನಾಡಿನ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆಗೆ ವಿಧಾನಸಭೆಯ ವಿಶೇಷ ಆಧಿವೇಶನ ಕರೆಯಿರಿ ನಾವು ಅಲ್ಲಿಗೆ ಬಂದು ಸುದೀರ್ಘ ಚರ್ಚೆ ನಡೆಸುತ್ತೇವೆ ಎಂದು ಸರ್ಕಾರವನ್ನು ಒತ್ತಾಯಿಸಿದರು. ಮಂತ್ರಿಗಳು, ಅವ್ಯವಹಾರದಲ್ಲಿ ತೊಡಗಿದರೆ ಆ ಬಗ್ಗೆ ತನಿಖೆ ಮಾಡುವುದನ್ನು ಬಿಟ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊವೀಡ್ ನಿರ್ವಹಣೆಯಲ್ಲಿ ವಿಫಲವಾಗಿವೆ ಎಂದು ಅವರು ಆರೋಪಿಸಿದರು.

ನಾವು ನ್ಯಾಯಾಲಯದ ತೀರ್ಪಿನ ಪರವಾಗಿದ್ದೇವೆ. ನನ್ನ ಹಾಗೂ ಹೆಚ್ ಡಿ ಕುಮಾರ ಸ್ವಾಮಿ ಮಧ್ಯೆ ಯಾವುದೇ ಕೋಲ್ಡ್ ವಾರ್, ಹಾಟ್ ವಾರ್ ಇಲ್ಲ. ನಾನು ಅವರ ಅಡಿಯಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ ಎಂದರು. ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಹೆಚ್.ಡಿ.ಕುಮಾರ ಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ನಾಯಕರ ಬಗ್ಗೆ ಅವರಿಗೆ ಕಾಳಜಿ ಇದೆ. ಧನ್ಯವಾದಗಳು ಎಂದರು.

ಹೋಂ ಕ್ವಾರಂಟೈನ್, ಜಿಲ್ಲಾಡಳಿತದ ನಿಯಮ ಗಾಳಿಗೆ ತೂರಿದ ಡಿ.ಕೆ. ಶಿವಕುಮಾರ್
ಕೊರೋನಾ ಸೋಂಕಿಗೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹೋಂ ಕ್ವಾರಂಟೈನ್ ಹಾಗೂ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ಕಲಬುರಗಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸ ಕೈಗೊಂಡಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.  ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಡಿಕೆ ಶಿವಕುಮಾರ್ ಅವರು ಹೋಮ್ ಕ್ವಾರಂಟೈನ್ ಗೆ ಒಳಗಾಗದೇ ಕೋವಿಡ್-19 ನಿಯಮ ಉಲ್ಲಂಘಿಸಿ ಪ್ರವಾಸ ಕೈಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. 

ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ನ ಪಾದುಕೆ ದರ್ಶನ ಪಡೆಯಲು ಶಿವಕುಮಾರ್ ಆಗಮಿಸುತ್ತಿದ್ದಂತೆ ನೂರಾರು ಬೆಂಬಲಿಗರು ಸಾಮಾಜಿಕ ಅಂತರ ಪಾಲನೆ ಮಾಡದೇ ಡಿಕೆಶಿವಕುಮಾರ್ ಅವರನ್ನು ಸ್ವಾಗತ ಮಾಡಿದ್ದಾರೆ. ಈಗಾಗಲೇ ಕೊರೊನಾ ಭೀತಿ ಹಿನ್ನೆಲೆಯಲ್ಲಿ ದತ್ತಾತ್ರೇಯ ದರ್ಶನ ಪಡೆಯಲು ಭಕ್ತರಿಗೆ ನಿಷೇಧ ಹೇರಿ ಕಲಬುರಗಿ ಜಿಲ್ಲಾಡಳಿತ ಆದೇಶಿಸಿದೆ. ಹೀಗಿದ್ದರೂ ಡಿಕೆ ಶಿವಕುಮಾರ್ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×