ಬೆಳಗಾವಿ: ರಾಮ ಮಂದಿರದ ಭೂಮಿ ಪೂಜೆಗೆ ಒಂದೆಡೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದರೆ ಮತ್ತೊಂದೆಡೆ ಮುಹೂರ್ತ ನಿಗದಿಪಡಿಸಿದ್ದ ವಿದ್ವಾಂಸ ವಿಜಯೇಂದ್ರ ಶರ್ಮ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ.
ಬೆಳಗಾವಿಯ ನಿವಾಸಿಯಾಗಿರುವ ವಿಜಯೇಂದ್ರ ಶರ್ಮ ಅವರಿಗೆ ಕರೆ ಮಾಡುತ್ತಿರುವ ವ್ಯಕ್ತಿಗಳು ಆ.05 ರಂದು ನಿಗದಿಪಡಿಸಿರುವ ಮುಹೂರ್ತವನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ.
ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶರ್ಮ ಅವರ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ವಿಜಯೇಂದ್ರ ಶರ್ಮಾ ಅವರು ಅಕ್ಷಯ ತೃತೀಯವೂ ಸೇರಿ ಒಟ್ಟು 4 ಮುಹೂರ್ತಗಳನ್ನು ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗಾಗಿ ಸಲಹೆ ನೀಡಿದ್ದರು. ಈ ಪೈಕಿ ಆ.05 ಸಹ ಇತ್ತು. ಟ್ರಸ್ಟ್ ನಿಂದ ಇದೇ ಮುಹೂರ್ತವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ರಾಮ ಮಂದಿರ ಚಳುವಳಿಯಲ್ಲಿ ಸಕ್ರಿಯರಾಗಿದ್ದ ವಿಜಯೇಂದ್ರ ಶರ್ಮಾ ಅವರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರಲ್ಲಿ ಒಬ್ಬರಾದ ಸ್ವಾಮಿ ಗೋವಿಂದ್ ದೇವ್ ಗಿರಿ ಜೀ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.
ವಿದ್ವಾಂಸ ವಿಜಯೇಂದ್ರ ಶರ್ಮಾ ಮಾಜಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆ ಸಲಹೆ ನೀಡಿದ್ದಾರೆ.
Follow us on Social media