ಕಲಬುರಗಿ: ಕೊರೋನಾ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಿದ್ದ ರಾಜ್ಯ ಸರ್ಕಾರ, ಹಣ ಲೂಟಿ ಹೊಡೆಯುವುದರಲ್ಲಿ ಮಗ್ನವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಮಾರಿ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಮಾಡದೇ ಸರ್ಕಾರದೊಂದಿಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದೆ. ಕೇಂದ್ರ ಸರಕಾರ ನಾಲ್ಕು ಲಾಕ್ ಡೌನ್ ಹಾಗೂ ಮೂರು ಅನ್ ಲಾಕ್ ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಹೀಗಿರುವಾಗ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಿದ್ದ ರಾಜ್ಯ ಸರ್ಕಾರ ಹಣ ಲೂಟಿ ಹೊಡೆಯುವುದರಲ್ಲಿ ಮಗ್ನವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.
ವೈದ್ಯಕೀಯ ಸಲಕರಣೆ ಸೇರಿ ಇತರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ ಅವರು, ರಾಷ್ಟ್ರದಲ್ಲಿಯೇ ಮೊದಲ ಸಾವು ಸಂಭವಿಸಿರುವುದು ಕಲಬುರಗಿ ನಗರದಲ್ಲಿ. ಆದರೂ, ಕೇವಲ ಒಂದೇ ಒಂದು ಕೊರೊನಾ ಸೋಂಕು ತಪಾಸಣೆ ಕೇಂದ್ರ ಇಲ್ಲಿ ಸ್ಥಾಪಿಸಲಾಗಿದೆ. ಈ ಮೊದಲು ಹಲವಾರು ಬಾರಿ ನಾನು ಇಎಸ್ ಐ ಸಿ ನಲ್ಲಿ ಒಂದು ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಆದರೂ ಫಲಪ್ರದವಾಗಿಲ್ಲ, ಹೀಗಾಗಿ ಇಲ್ಲಿಯವರೆಗೆ ಕನಿಷ್ಠ ಐದು ಸಾವಿರ ವರದಿಗಳು ಬಾಕಿ ಉಳಿದಿವೆ. ಇದು ತಕ್ಷಣದ ಚಿಕಿತ್ಸೆ ನೀಡಲು ಅಡ್ಡಗಾಲು ಆಗಿದ್ದು, ಇದು ಸರ್ಕಾರಕ್ಕೆ ಯಾಕೆ ತಿಳಿಯುತ್ತಿಲ್ಲ ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Follow us on Social media