ಮೈಸೂರು: ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತೆ ಇಲಾಖೆ ನಡೆಸಿದ ಸ್ವಚ್ಛ ಗ್ರಾಮ-ಸ್ವಚ್ಛ ಪರಿಸರ ಸ್ಪರ್ಧೆಯಲ್ಲಿ ಮೈಸೂರು ಮೂಲದ ಕೆ ಗೋಪಿನಾಥ್ ನಿರ್ದೇಶಿಸಿ ನಿರ್ಮಾಣ ಮಾಡಿದ ಸ್ವಚ್ಛ ಪರಿಸರ ಸಾಕ್ಷ್ಯ ಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.
ಪ್ರೊಫೆಸರ್ ಯುಎನ್ ರವಿಕುಮಾರ್ ಅವರು ದ್ರವ ತ್ಯಾಜ್ಯ ನಿರ್ವಹಣೆ ಮೇಲೆ ರೂಪನಗರದ ತಮ್ಮ ಮನೆಯಲ್ಲಿ ಮಾಡಿದ ಆವಿಷ್ಕಾರದ ಮೇಲೆ ಗೋಪಿನಾಥ್ ಕಿರುಚಿತ್ರವನ್ನು ನಿರ್ಮಿಸಿದ್ದರು. ಕಿರುಚಿತ್ರದ ಅವಧಿ 12 ನಿಮಿಷ 40 ಸೆಕೆಂಡುಗಳಿದ್ದು ನೀರಿನ ಸಂರಕ್ಷಣೆ ಬಗ್ಗೆ ವಿವರಿಸಲಾಗಿದೆ.
ಪರಿಸರವಾದಿಯಾದ ರವಿಕುಮಾರ್ ಮೈಸೂರಿನಲ್ಲಿ ಮಳೆ ನೀರು ಕೊಯ್ಲಿನ ಬಗ್ಗೆ ಮೊದಲ ಸಲ ಪ್ರಯೋಗ ಮಾಡಿ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ. ಮಳೆ ನೀರು ಕೊಯ್ಲಿನ ನೀರನ್ನು ಪ್ರತಿದಿನ ಮನೆ ಬಳಕೆಗೆ ಬಳಸಿ ನಿಷ್ಪ್ರಯೋಜಕ ಮನೆಬಳಕೆಯ ನೀರನ್ನು ಹೊರಗೆ ಹೂತೋಟ, ತರಕಾರಿ ಬೆಳೆಯಲು ಬಳಸುತ್ತಾರೆ.
ಪರಿಸರ, ಆರೋಗ್ಯ, ಸಾಮಾಜಿಕ ಅರಿವುಗಳ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಗೋಪಿನಾಥ್ ಅವರು ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಳೆನೀರು ಕೊಯ್ಲು ಸಹಾಯಕಾರಿ ಎನ್ನುತ್ತಾರೆ.
ಮೈಸೂರು ಬೆಳೆಯುತ್ತಿರುವ ನಗರ, ಇಲ್ಲಿನ ಜನಸಂಖ್ಯೆ, ನಗರೀಕರಣ ಹೆಚ್ಚಾಗುತ್ತಿರುವ ಸಮಯದಲ್ಲಿ ನೀರು, ಪರಿಸರ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಹಸಿರು ಪರಿಕಲ್ಪನೆಯನ್ನು ನಮ್ಮ ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಬೆಳೆಸುವುದು ಅವಶ್ಯವಿದೆ ಎನ್ನುತ್ತಾರೆ ಗೋಪಿನಾಥ್.
Follow us on Social media