ಚಿಕ್ಕಮಗಳೂರು: ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕದೂರ್ ತಾಲ್ಲೂಕಿನ ಎಮ್ಮೆಡೋಡಿ ಗ್ರಾಮದ ಬಳಿಯ ಕೃಷಿಭೂಮಿಯಲ್ಲಿ ಮೂರು ವರ್ಷದ ಗಂಡು ಆನೆಯನ್ನು ಕರೆಂಟ್ ಶಾಕ್ ನಿಂದ ಮೃತಪಟ್ಟಿದ್ದು ಆನೆ ಕಾರಿಡಾರ್ಗಳ ಅತಿಕ್ರಮಣದಿಂದಾಗಿ ಇಂತಹ ದುರಂತಗಳು ಸಂಭವಿಸುತ್ತಿವೆ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಆರೋಪಿಸಿದ್ದಾರೆ.
ಆಹಾರ ಅರಸಿ ಕಾಡಾನೆ ಕೃಷಿ ಭೂಮಿಗೆ ಬಂದಿದ್ದು ಈ ವೇಳೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಈ ಘಟನೆಯ ನಂತರ ಜಮೀನಿನ ಮಾಲೀಕರು ಪರಾರಿಯಾಗಿದ್ದು, ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿದ್ದು ಈ ವೇಳೆ ಗಂಡಾನೆಯೊಂದು ಕರೆಂಟ್ ಶಾಕ್ ನಿಂದ ಮೃತಪಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಬದ್ಧತೆಯ ಕೊರತೆಯಿಂದಾಗಿ ಮನುಷ್ಯ-ಪ್ರಾಣಿಗಳ ಸಂಘರ್ಷವು ಕೊನೆಯಿಲ್ಲದ ಸಮಸ್ಯೆಯಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಡಿ ವಿ ಗಿರೇಶ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಪ್ರಸ್ತುತ ಕಾಡಾನೆ ಮೃತಪಟ್ಟಿರುವ ಸ್ಥಳವು ಕಮ್ಮನಹಳ್ಳಿ ಮತ್ತು ಚುರ್ಚೆಗುಡ್ಡ ಈ ಎರಡು ಮೀಸಲು ಕಾಡುಗಳ ನಡುವೆ ಇದೆ. ಕಳೆದ 50 ವರ್ಷಗಳಿಂದ ಇಲ್ಲಿ ಕೂಲಿ ಕಾರ್ಮಿಕರು ಅಕ್ರಮವಾಗಿ ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿದ್ದಾರೆ. ಈ ಪ್ರದೇಶವನ್ನು ವ್ಯವಸ್ಥಿತವಾಗಿ ಅತಿಕ್ರಮಿಸಲಾಗಿದೆ ಮತ್ತು ಅರ್ಧಕ್ಕಿಂತ ಹೆಚ್ಚು ಅತಿಕ್ರಮಣದಾರರಿಗೆ ಕಾನೂನು ಭಯವಿಲ್ಲ ಎಂದು ಅವರು ಹೇಳಿದರು.
ಆನೆ ಕಾರಿಡಾರ್ನಲ್ಲಿನ ಅತಿಕ್ರಮಣಗಳನ್ನು ಸರ್ಕಾರ ತೆರವುಗೊಳಿಸಬೇಕು ಮತ್ತು ಅತಿಕ್ರಮಣದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಿರೇಶ್ ಒತ್ತಾಯಿಸಿದರು.
Follow us on Social media